Advertisement

ವಿಪಕ್ಷಗಳ ಒಗ್ಗಟ್ಟಿನಿಂದ ಬಿಜೆಪಿಗೆ ಹತಾಶೆ: ಬೈರೇಗೌಡ

04:47 PM Jul 25, 2018 | |

ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗಗಳೊಂದಿಗೆ ಕಾಂಗ್ರೆಸ್‌ ಹೊಂದಾಣಿಕೆಯೊಂದಿಗೆ ಸ್ಪರ್ಧಿಸಲು ಮುಂದಾಗಿರುವುದಕ್ಕೆ ಬಿಜೆಪಿಯವರು ಹತಾಶರಾಗಿದ್ದಾರೆ. ಹೀಗಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Advertisement

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ವಿಪಕ್ಷಗಳೆಲ್ಲ ಒಂದುಗೂಡಿರುವುದು ಬಿಜೆಪಿಗೆ ನಡುಕ ಹುಟ್ಟಿ, ಧೃತಿಗೆಡುವಂತಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ತಮ್ಮ ಮಿತ್ರಪಕ್ಷಗಳಿಗೆ ನೀಡಿದ್ದ ಆಶ್ವಾಸನೆ, ಭರವಸೆ ಈಡೇರಿಸಿಲ್ಲ. ಆದ್ದರಿಂದ ಶಿವಸೇನೆ, ಟಿಡಿಪಿ, ಪಿಡಿಪಿ ಸೇರಿದಂತೆ ಬಿಜೆಪಿಯೊಂದಿಗೆ ಸಖ್ಯ ಬೆಳೆಸಿದ್ದ ಪಕ್ಷಗಳೆಲ್ಲವೂ ದೂರಾಗುತ್ತಿವೆ. ಅದರ ಶಕ್ತಿ ಕಡಿಮೆಯಾಗಿ, ಬಿಜೆಪಿ ಭವಿಷ್ಯ ಅನಿಶ್ಚಿತತೆಯಿಂದ ಕೂಡಿದೆ. 2019ರಲ್ಲಿ ಅದು ಅಧಿಕಾರಕ್ಕೆ ಬರುವಂತಹ ಅವಕಾಶಗಳು ದಿನೇ ದಿನೇ ಕ್ಷೀಣಿಸುತ್ತಿದೆ. ದೇಶದ ಜನರಿಗೆ ನೀಡಿದ್ದ ಭರವಸೆ ಈಡೇರಿಸುವಲ್ಲೂ ವಿಫಲವಾಗಿದೆ. ಬಿಜೆಪಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ರಾಜಕೀಯ ಧೃವೀಕರಣ ಆರಂಭಗೊಂಡಿದ್ದು, ಪ್ರಧಾನಿ ಯಾರೆಂಬುದು ಮುಂದೆ ನಿರ್ಧಾರವಾಗಲಿದೆ ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಸಂಸದ ಪ್ರಹ್ಲಾದ ಜೋಶಿ ಹಕ್ಕುಚ್ಯುತಿ ಮಂಡಿಸುವುದಿದ್ದರೆ ಮಂಡಿಸಲಿ. ಆ ಕುರಿತು ಸದನದಲ್ಲಿ ಸಮಗ್ರ ಚರ್ಚೆ ನಡೆಯಲಿ. ಬೆಂಗಳೂರಿನಲ್ಲಿ ಲಾಕರ್‌ ಪ್ರಕರಣಕ್ಕೆ ಸಂಬಂಧಿಸಿ ಆರೋಪಿತ ಅವಿನಾಶ ಅಮರಲಾಲ್‌ ರಾಜಕೀಯ ಪಕ್ಷಗಳ ಮುಖಂಡರ ಮಕ್ಕಳೊಂದಿಗೆ ನಂಟು ಹೊಂದಿದ್ದರ ಬಗ್ಗೆ ತನಿಖೆಯಾಗಲಿ. ಅದರ ಸತ್ಯಾಂಶ ಹೊರಗೆ ಬರಲಿ. ಅದಕ್ಕೂ ಮೊದಲು ಊಹಾಪೋಹ ಆಧಾರ ಮೇಲೆ ಇನ್ನೊಬ್ಬರ ಮೇಲೆ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಸಮಗ್ರ ತನಿಖೆಯ ನಂತರ ತಪ್ಪಿತಸ್ಥರ ಮೇಲೆ ಸಂಬಂಧಪಟ್ಟವರು ನಿಷ್ಪಕ್ಷಪಾತವಾಗಿ ಕ್ರಮಕೈಗೊಳ್ಳಲು ಸಾಕಷ್ಟು ಅವಕಾಶಗಳಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next