ಕಾರವಾರ: ಮಳೆ ನೀರಲ್ಲಿ ಕೊಚ್ಚಿ ಹೋಗಿ ಕಳೆದ ಗುರುವಾರ ಮೃತಪಟ್ಟ ಸತೀಶ್ ಪಿ.ನಾಯ್ಕ, ಉಲ್ಲಾಸ್ ಜಟ್ಟಿ ಗಾವುಡಿ ಕುಟುಂಬದ ಸದಸ್ಯರನ್ನು ಸಂತೈಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಎರಡೂ ಕುಟುಂಬದವರಿಗೆ ತಲಾ ಐದು ಲಕ್ಷ ರೂ.ಪರಿಹಾರ ವಿತರಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಅನಾಹುತ ಸೃಷ್ಟಿಸಿದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಜುಲೈ ಕೊನೆ ವಾರದವರಗೆ ಕಾದು ನೋಡಿ, ಮೋಡ ಬಿತ್ತನೆಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ಮೋಡ ಬಿತ್ತನೆ ಬಗ್ಗೆ ಯೋಚನೆ ಮಾಡಲಾಗುತ್ತಿದೆ. ಮೋಡ ಬಿತ್ತನೆಯ ಪರಿಣಾಮ ತಿಳಿದು, ಮುಂದಿನ ಹೆಜ್ಜೆ ಇಡಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.
ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬೆಟ್ಕುಳಿ ಗ್ರಾಮದ ಗದ್ದೆಗಳು ಜಲಾವೃತವಾಗಿರುವ ಪ್ರದೇಶವನ್ನು ಸಚಿವರು ವೀಕ್ಷಿಸಿದರು.
ನೆರೆ ಪೀಡಿತ ಪ್ರದೇಶಕ್ಕೆ ಬರುವ ಉದ್ದೇಶ ಅಧಿಕಾರಿಗಳ ವರ್ಗಕ್ಕೆ ಚುರುಕು ಮುಡಿಸುವುದಾಗಿದೆ. ಜನಪರವಾಗಿ ಅಧಿಕಾರಿಗಳು ಸಹ ಬದಲಾಗಬೇಕಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಮಳೆ ಅವಾಂತರ ಸೃಷ್ಟಿ ಮಾಡಿದೆ. ಆದರೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳ ಸ್ಥಿತಿ ಭಿನ್ನವಾಗಿದೆ. ಮುಂಗಾರು ಮಳೆಗೆ ರಾಜ್ಯದಲ್ಲಿ 20 ಜನ ಸಾವನ್ನಪ್ಪಿದ್ದಾರೆ. 40 ಕ್ಕೂ ಹೆಚ್ಚು ಜಾನುವಾರಗಳು ಸಾವನ್ನಪ್ಪಿವೆ. ಹಲವು ಮನೆಗಳು ಹಾನಿಯಾಗಿವೆ ಎಂದರು.
ಹಾನಿಯಾದ ಮನೆಗೆ 1 ಲಕ್ಷ 25 ಸಾವಿರ ಪರಿಹಾರ ನೀಡಲಾಗುತ್ತಿದೆ. ಮಳೆ ಹಾನಿಗೆ ಸರ್ಕಾರ ಪರಿಹಾರ ಕೊಡಲು ಸಿದ್ದವಿದೆ ಎಂದರು.
ಮಂಗಳೂರು, ಉಡುಪಿ ಜಿಲ್ಲೆಯಲ್ಲೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಅವರ ಜೊತೆ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಸಿಇಒ ಈಶ್ವರ ಕಾಂದೂ ಇದ್ದರು.