ಶಿರ್ವ: ಕ್ರೈಸ್ತ ಸಮುದಾಯದ ಉದ್ಯಮಿ ಗ್ಯಾಬ್ರಿಯಲ್ ಫೇಬಿಯನ್ ನಜರತ್ ಅವರು ಕಟ್ಟಿಸಿ ಹಿಂದುಗಳಿಗೆ ಕೊಡುಗೆಯಾಗಿ ನೀಡಿದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ರಾಜ್ಯ ಸರಕಾರದ ಮುಜರಾಯಿ ಖಾತೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ರವಿವಾರ ಭೇಟಿ ನೀಡಿ ಶ್ರೀದೇವರ ಪ್ರಸಾದ ಪಡೆದರು.
ಬಳಿಕ ಮಾತನಾಡಿದ ಸಚಿವರು ಕ್ರೈಸ್ತ ಸಮುದಾಯದ ಉದ್ಯಮಿ ಗ್ಯಾಬ್ರಿಯಲ್ ನಜರತ್‌ಕಟ್ಟಿಸಿದ ಕಲಾತ್ಮಕ ದೇಗುಲದಲ್ಲಿ ಗಣಪತಿಯನ್ನು ಸ್ತುತಿಸಲು ಸಮಸ್ತ ಭಕ್ತಾಧಿಗಳಿಗೆ ಅವಕಾಶ ಮಾಡಿಕೊಟ್ಟಿರುವುದು ದೇಶ ಮತ್ತು ರಾಜ್ಯದ ಬೆರಳೆಣಿಕೆಯ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು,ಸರಕಾರದ ಮತ್ತು ಇಲಾಖೆಯ ಪರವಾಗಿ ಅಭಿನಂದನೆಗಳು. ದೇವಸ್ಥಾನದಲ್ಲಿ ಭಜನಾ ಸಪ್ತಾಹ,ಧಾರ್ಮಿಕ ಮತ್ತು ಸಾಂಸðತಿಕ ಚಟುವಟಿಕೆಗಳು ನಡೆಯುವ ಮೂಲಕ ಸಮಾಜ ಕಟ್ಟುವ ಕೇಂದ್ರವಾಗಿ ರೂಪುಗೊಂಡು ಎಲ್ಲಾ ವರ್ಗದ ಜನರಿಗೆ ದೇವರ ಆಶೀರ್ವಾದ ಲಭಿಸಲಿ. ದೇವಸ್ಥಾನದ ಬೆಳವಣಿಗೆಗೆ ಪೂರಕವಾಗಿ ಸರಕಾರದ ಸಹಾಯ ಯಾಚಿಸಿದಲ್ಲಿ ಅವರ ಜತೆ ನಿಂತು ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ದೇಗುಲದ ವತಿಯಿಂದ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಸಮ್ಮಾನಿಸಲಾಯಿತು. ಸಚಿವರು ದೇಗುಲದ ನಿರ್ಮಾತೃ ಗ್ಯಾಬ್ರಿಯಲ್ ನಜರತ್ ಅವರನ್ನು ಗೌರವಿಸಿದರು.
ದೇಗುಲದ ಅರ್ಚಕ ಗುಂಡಿಬೈಲು ನರಸಿಂಹ ಭಟ್, ಸತೀಶ್ ಶೆಟ್ಟಿ ಮಲ್ಲಾರು, ಕುತ್ಯಾರು ಪ್ರಸಾದ್ ಶೆಟ್ಟಿ, ಗಿರಿಧರ ಪ್ರಭು,ಶಿರ್ವ ಗ್ರಾ.ಪಂ. ಸದಸ್ಯರಾದ ಶ್ರೀನಿವಾಸ ಶೆಣೈ,ಪ್ರವೀಣ್ ಸಾಲಿಯಾನ್,ಕಾರ್ಯಕರ್ತರಾದ ರಾಜೇಶ್ ನಾಯ್ಕ, ದಿನೇಶ್ ಪೂಜಾರಿ,ಪ್ರಶಾಂತ್ ಪಾಲಮೆ,ನಿತಿನ್ ನಾಯಕ್,ಸೂರಜ್,ಜಯಂತ್, ರಾಜೇಶ್,ಚೇತನ್ ಮತ್ತಿತರರು ಉಪಸ್ಥಿತರಿದ್ದರು.