ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ದುರಂತ ಪ್ರಕರಣದಲ್ಲಿ ಇದುವರೆಗೆ ನಾಲ್ವರ ಮೃತದೇಹ ಪತ್ತೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ, ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಸಾಂತ್ವ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುರಂತ ಹೇಗಾಯಿತು ಎನ್ನುವ ಬಗ್ಗೆ ತನಿಖೆಯಾಗುತ್ತಿದೆ. ಘಟನೆಯ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದರು.
ಸರ್ಕಾರ ನಿಮ್ಮ ಜೊತೆಯಿದೆ. ಇಲಾಖೆಯಿಂದ ತಲಾ 6 ಲಕ್ಷ ಪರಿಹಾರ ನೀಡಲು ಸಾಧ್ಯವಿದೆ. ಹೆಚ್ಚುವರಿ ಪರಿಹಾರವನ್ನು ನಾಳೆ ಸಂಜೆಯೊಳಗೆ ಕುಟುಂಬಗಳಿಗೆ ನೀಡುತ್ತೇವೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ:ಮಂಗಳೂರು ಬೋಟ್ ದುರಂತ: ಇಬ್ಬರ ಮೃತದೇಹ ಪತ್ತೆ, ಇನ್ನೂ ಇಬ್ಬರಿಗಾಗಿ ಹುಡುಕಾಟ
ದುರಂತದಲ್ಲಿ ನಾಪತ್ತೆಯಾದವರ ನಾಲ್ಕು ಮಂದಿಯ ಮೃತದೇಹ ಪತ್ತೆಯಾಗಿದೆ. ಇನ್ನಿಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲಿ ಅವರ ಮೃತದೇಹವನ್ನೂ ಪತ್ತೆ ಮಾಡುತ್ತೇವೆ ಎಂದು ಶೋಧ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದರು.
ಮೀನುಗಾರಿಕೆಗಾಗಿ ನಗರದ ಬಂದರಿನಿಂದ ತೆರಳಿದ್ದ ‘ಶ್ರೀ ರಕ್ಷಾ’ ಎಂಬ ಹೆಸರಿನ ಪರ್ಸೀನ್ ಬೋಟ್ ಸೋಮವಾರ ರಾತ್ರಿ ಅರಬಿ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಬೋಟ್ ನಲ್ಲಿ ಒಟ್ಟು 25 ಮಂದಿ ತೆರಳಿದ್ದು, 19 ಮಂದಿ ಪಾರಾಗಿದ್ದಾರೆ. ನಾಪತ್ತೆಯಾದ ಆರು ಜನರಲ್ಲಿ ನಾಲ್ವರ ಮೃತದೇಹ ಇದುವರೆಗೆ ಪತ್ತೆಯಾಗಿದೆ.