ಬೆಂಗಳೂರು: ಅತೀವೃಷ್ಟಿಯಿಂದಾಗಿ ಶಿರಸಿ-ಸಿದ್ದಾಪುರ ಗ್ರಾಮೀಣಾ ಭಾಗದ ರಸ್ತೆಗಳು, ಸೇತುವೆಗಳು ಹಾಗೂ ಕಿರು ಸೇತುವೆಗಳು ಸಂಪೂರ್ಣವಾಗಿ ಹಾಳಾಗಿದ್ದು ದುರಸ್ತಿ ಮತ್ತು ಪುನರ್‌ನಿರ್ಮಾಣಕ್ಕಾಗಿ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 10 ಕೋಟಿ ರೂ. ಅನುದಾನ ಒದಗಿಸುವಂತೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಶಾಸಕ ಕಾಗೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಆಗಿರುವ ನಷ್ಟದ ಬಗ್ಗೆ ವಿವರಿಸಿದರು.
ಈ ವೇಳೆ ಅತೀವೃಷ್ಟಿಯಿಂದಾಗಿ ಶಿರಸಿ-ಸಿದ್ದಾಪುರದಲ್ಲಿ ಗ್ರಾಮೀಣ ಭಾಗದ ರಸ್ತೆಗಳು, ಸೇತುವೆಗಳು ಹಾಗೂ ಕಿರುಸೇತುವೆಗಳು ಸಂಪೂರ್ಣವಾಗಿ ಹಾಳಾಗಿದೆ. ಆದ್ದರಿಂದ ಇವುಗಳ ಪುನರ್ ನಿರ್ಮಾಣಕ್ಕಾಗಿ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 10 ಕೋಟಿ ರೂ. ಅನುದಾನ ಒದಗಿಸಬೇಕೆಂದು ಕೋರಿದರು.
ಅಲ್ಲದೇ ಅತೀವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಅಡಿಕೆ,ಭತ್ತ, ಕಾಳುಮೆಣಸು ಇತ್ಯಾದಿ ಬೆಳೆಗಳಿಗೆ ಕೊಳೆರೋಗ ಉಂಟಾಗಿದ್ದು, ರೈತರಿಗೆ ಪರಿಹಾರ ನೀಡಲು ಸಂಬಂದಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಮನವಿ ಮಾಡಿದರು. ಜತೆಗೆ ಹವಾಮಾನ ಆಧಾರಿತ ಬೆಳೆ ವಿಮೆಗೆ ಅಳವಡಿಸಿರುವ ಟೆಲಿಮೆಟ್ರಿಕ್ ಮಳೆ ಮಾಪನಯಂತ್ರದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ.
ಇದರಿಂದಾಗಿ ರೈತರು ಹವಾಮಾನ ಆಧಾರಿತ ಬೆಳೆ ವಿಮೆ ದೊರೆಯದೇ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಸರಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಎಂದು ಕಾಗೇರಿಯವರು ವಿನಂತಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಯವರು ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.