Advertisement

ಸಾಮಾಜಿಕ ಜಾಲತಾಣದಲ್ಲಿ ಕೃಷಿ ಕಾನೂನು ಬಗ್ಗೆ ತಪ್ಪು ಮಾಹಿತಿ : ಸಚಿವ ಡಾ.ಕೆ.ಸುಧಾಕರ್

08:12 PM Feb 07, 2021 | Team Udayavani |

ಬೆಂಗಳೂರು :  ಕೃಷಿ ಕಾನೂನು ಕುರಿತು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ. ಈ ಕಾನೂನುಗಳು ರೈತ ವಿರೋಧಿಯಲ್ಲ ಎಂಬುದನ್ನು ಜನರಿಗೆ ತಿಳಿಸಬೇಕೆಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.

Advertisement

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ, ರಾಜ್ಯ ಸಾಮಾಜಿಕ ಜಾಲತಾಣ ಪ್ರಕೋಷ್ಠದಿಂದ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸರ್ಕಾರ ಹಾಗೂ ವೈಯಕ್ತಿಕ ಸಾಧನೆ, ಯೋಜನೆಗಳ ಬಗ್ಗೆ ತಪ್ಪು ಕಲ್ಪನೆ ನಿವಾರಿಸಲು ಸಾಮಾಜಿಕ ಜಾಲತಾಣ ಸಮರ್ಥವಾಗಿ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಹಿಂದೆ ಪತ್ರಿಕೋದ್ಯಮವು ಸರ್ಕಾರವನ್ನೇ ಬದಲಿಸುವಷ್ಟು ಬಲವಾಗಿತ್ತು. ನಂತರ ಬಂದ ದೃಶ್ಯ ಮಾಧ್ಯಮ ಕೂಡ ಇನ್ನಷ್ಟು ಬಲವಾಗಿ ಬೆಳೆದಿದೆ. ಈಗ ಸಾಮಾಜಿಕ ಮಾಧ್ಯಮ ಬಲವಾಗಿ ಬೆಳದಿದೆ. ಇದರಲ್ಲಿ ಪ್ರತಿಯೊಬ್ಬರೂ ತಮ್ಮ ಸಂದೇಶ ನಿರ್ಭೀತಿಯಿಂದ ನೀಡಬಹುದೆಂದರು.

ರಾಜಕೀಯದಲ್ಲಿ ಸಾಮಾಜಿಕ ಜಾಲತಾಣ ಯಶಸ್ವಿಯಾಗಿ ಬಳಸಬಹುದು. ಚುನಾವಣೆ ಮಾತ್ರವಲ್ಲದೆ, ಬೇರೆ ಸಮಯದಲ್ಲೂ ಇದನ್ನು ಬಳಸಬಹುದು. ಜನಪ್ರತಿನಿಧಿ ತಾವು ಮಾಡುವ ಕೆಲಸಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸದಾ ಹಂಚಿಕೊಳ್ಳಬೇಕು. ಕೆಲ ಮತದಾರರು ಸಂದರ್ಭಕ್ಕನುಗುಣವಾಗಿ ಮತ ಹಾಕುತ್ತಾರೆ. ಇಂತಹ ಮತದಾರರು 40% ರಿಂದ 50% ರಷ್ಟಿರುತ್ತಾರೆ. ಇಂತಹವರಿಗೆ ನಾವು ಮಾಡುವ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಲು ಸಾಮಾಜಿಕ ಜಾಲತಾಣ ಬಳಸಿಕೊಳ್ಳಬೇಕು ಎಂದರು.

ಬಿಜೆಪಿಯಲ್ಲಿ ಪಕ್ಷದ ಪ್ರಣಾಳಿಕೆಯೇ ನಮಗೆ ಭಗವದ್ಗೀತೆಯಾಗಿದ್ದು, ಅದನ್ನು ಈಡೇರಿಸದಿದ್ದರೆ ಜನರು ತಿರಸ್ಕರಿಸುತ್ತಾರೆ. ಜನರು ಬೆಳಗೆದ್ದರೆ ಮೊಬೈಲ್ ನೋಡುವುದು ಹವ್ಯಾಸವಾಗಿದ್ದು, ಎಲ್ಲರೂ ಸಾಮಾಜಿಕ ಜಾಲತಾಣ ಬಳಸುತ್ತಾರೆ. ಇದನ್ನು ಸಮಗ್ರವಾಗಿ ಬಳಸಿಕೊಂಡರೆ ಪಕ್ಷ ಹಾಗೂ ಮುಖಂಡರಿಗೆ ಚುನಾವಣೆಗೆ ನೆರವಾಗುತ್ತದೆ ಎಂದರು.

Advertisement

ಇದನ್ನೂ ಓದಿ :ಪ.ಬಂಗಾಳದಲ್ಲಿ ಬದಲಾವಣೆ ತರಲು ಬಿಜೆಪಿಯಿಂದ ಮಾತ್ರ ಸಾಧ್ಯ: ಮಮತಾ ವಿರುದ್ಧ ಮೋದಿ ವಾಗ್ದಾಳಿ

ನಾನು ಕೂಡ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತೇನೆ. ಪ್ರಧಾನಿ ಮೋದಿಯವರಿಗೆ ಸಾಮಾಜಿಕ ಜಾಲತಾಣದಲ್ಲಿ ಸುಮಾರು 10 ಕೋಟಿ ಫಾಲೋವರ್ಸ್ ಇದ್ದಾರೆ. ಇದು ನಮಗೆ ಮಾದರಿಯಾಗಬೇಕು. ಬಿಜೆಪಿ ಪಕ್ಷದಲ್ಲಿ ಮೋದಿಯವರಂತಹ ದಿಟ್ಟ ನಾಯಕತ್ವ, ಉತ್ತಮ ಕಾರ್ಯಕರ್ತರ ಪಡೆ ಇದೆ. ಇದನ್ನು ಜನರಿಗೆ ತಿಳಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next