ಬೆಂಗಳೂರು: ಕೋವಿಡ್ 19 ಪರೀಕ್ಷೆ ಮಾಡುವ ಸಂದರ್ಭದಲ್ಲಿ ಪರೀಕ್ಷೆಗೆ ಒಳಪಡುವವರು ತಮ್ಮ ವಿಳಾಸ, ಮೊಬೈಲ್ ಸಂಖ್ಯೆಗಳನ್ನು ತಪ್ಪು ತಪ್ಪು ನೀಡಿದ ಘಟನೆಗಳು ರಾಜ್ಯದಲ್ಲಿ ಬೆಳಕಿಗೆ ಬರುತ್ತಿದೆ. ಇದರಿಂದ ಸೋಂಕಿತರ ಪತ್ತೆ ಮಾಡುವುದೇ ಕಷ್ಟವಾಗಿದೆ. ಕೋವಿಡ್ ವಾರಿಯರ್ಸ್ ಗೆ ಇದೊಂದು ಸವಾಲಾಗಿದೆ. ಇದಕ್ಕಾಗಿ ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಹೆಚ್ಚು ಕೋವಿಡ್ ಟೆಸ್ಟ್ ಮಾಡಿದರಷ್ಟೇ ಸೋಂಕು ನಿಯಂತ್ರಣ ಸುಲಭವಾಗುತ್ತದೆ. ರಾಜ್ಯದಲ್ಲಿ ಪ್ರತಿದಿನ 30-40 ಸಾವಿರ ಟೆಸ್ಟ್ ಮಾಡಲಾಗುತ್ತಿದೆ. ಕೆಲವರು ತಪ್ಪು ವಿಳಾಸ, ತಪ್ಪು ಮೊಬೈಲ್ ನಂಬರ್ ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಡ್ಡಾಯವಾಗಿ ಆಧಾರ್, ಐಡಿ ಕಾರ್ಡ್ ತೋರಿಸಿ ಒಟಿಪಿ ಬಂದ ಮೇಲೆ ಟೆಸ್ಟ್ ಮಾಡಲು ಸೂಚನೆ ನೀಡಿದ್ದೇನೆ ಎಂದಿದ್ದಾರೆ.
ಕೋವಿಡ್ ಪಾಸಿಟಿವ್ ಆದರೂ ಬಹಳಷ್ಟು ಮಂದಿ ಸೋಂಕಿತರು ಆರೋಗ್ಯ ಅಧಿಕಾರಿಗಳ ಕೈಗೆ ಸಿಗದೆ ಓಡಾಡುತ್ತಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ ಜಾಸ್ತಿಯಾಗುವ ಆತಂಕ ಎದುರಾಗಿದೆ. ಹೀಗಾಗಿ ಸಚಿವರು ಹೊಸ ಸೂಚನೆ ನೀಡಿದ್ದಾರೆ.