ಚಿಕ್ಕಬಳ್ಳಾಪುರ: ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿಸಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ನಂದಿಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಂದಿಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶ ಆಕರ್ಷಕವಾಗಿದೆ. ಇದಕ್ಕೆ ಐತಿಹಾಸಿಕ, ಧಾರ್ಮಿಕ ಪ್ರಾಮುಖ್ಯವಿದ್ದು, ವಿಶೇಷವಾದ ಸಸ್ಯ ಸಂಪತ್ತುಯಿದೆ. ಇವೆಲ್ಲವನ್ನೂ ಗಮನಿಸಿ ಪ್ರವಾಸೋದ್ಯಮ ಕ್ಷೇತ್ರ ವಾಗಿಸ ಬಹುದು. ಇದಕ್ಕಾಗಿ ಸರ್ಕಾರ ಈಗಾಗಲೇ 10 ಕೋಟಿ ರೂ.ಅನುದಾನ ನೀಡಿದೆ ಎಂದರು.
ರೋಪ್ ವೇ: ಕಳೆದ 15 ವರ್ಷಗಳಿಂದ ರೋಪ್ ವೇ ಬೇಕು ಎಂದು ಜನರು ಬೇಡಿಕೆ ಇಡುತ್ತಿದ್ದಾರೆ. ಅಂತಾ ರಾಷ್ಟ್ರೀಯ ಕಂಪನಿಯೊಂದು ಇದನ್ನು ಮಾಡಲು ಮುಂದಾಗಿ ನಂತರ ಕಾರಣಾಂತರದಿಂದ ಯೋಜನೆ ಕೈ ಬಿಟ್ಟಿತ್ತು. ಈಗ ಆ ಕನಸು ನನಸಾಗಲಿದೆ. ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು 10 ಎಕರೆಗೂ ಹೆಚ್ಚು ಜಾಗ ಪಡೆಯಲು ಪ್ರಯತ್ನಿಸಲಾಗಿದೆ. ಈ ರೀತಿ ಮಾಸ್ಟರ್ ಪ್ಲಾನ್ ಮಾಡಿ ಅನುಷ್ಠಾನಗೊಳಿಸಲಾಗುವುದು.
ಸಿಎಂ ಸಹಕಾರ: ತಕ್ಷಣದಲ್ಲಿ ಟೆಂಡರ್ ಆಗಿ ಎಲ್ಲ ಬಗೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಈ ತಾಣವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 30 ಕಿ.ಮೀ. ದೂರದಲ್ಲಿದ್ದು, ಒಂದು ಗಂಟೆಯಲ್ಲಿ ಬರಬಹುದು. ಈ ಪ್ರದೇಶ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಉತ್ತೇಜಿಸಿದ್ದಾರೆ ಎಂದರು.
ವಿಶ್ವದರ್ಜೆಯ ಪ್ರವಾಸಿ ಸೌಲಭ್ಯ: ಇದರ ಜೊತೆಗೆ ಎಕೋ-ಟೂರಿಸಂ, ಸುತ್ತಮುತ್ತಲಿನ ಬೆಟ್ಟಗಳಿಗೆ ಚಾರಣಧಾರಿಗಳು, ಪುರಾತತ್ವ ಸ್ಮಾರಕಗಳು, ನೆಲ್ಲಿಕಾಯಿ ಬಸವಣ್ಣ ಮತ್ತು ಮಂಟಪಗಳು ಸಂರಕ್ಷಣೆ, ಸುಂದರೀಕರಣ ಸೇರಿದಂತೆ ವಿಶ್ವದರ್ಜೆಯ ಪ್ರವಾಸಿ ಸೌಲಭ್ಯ ಕಲ್ಪಿಸಲಾಗುವುದು. ಮುಖ್ಯಮಂತ್ರಿಗಳು ಮಂಡಿಸಲಿರುವ ಆಯವ್ಯಯದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ನಿರ್ದೇಶಕ ರಾಕೇಶ್, ಕೆಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮಾ, ಜಿಲ್ಲಾ ಪಂಚಾಯತ್ ಸಿಇಒ .ಶಿವಶಂಕರ್, ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಅಧಿಕಾರಿ ಜಿತೇಂದ್ರನಾಥ್, ಜಿಲ್ಲಾಧಿಕಾರಿ ಆರ್.ಲತಾ, ಎಸ್ಪಿ ಮಿಥುನ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.