ಶಿವಮೊಗ್ಗ: ನಗರದ ಸರ್ಕಾರಿ ಶಾಲೆಗಳನ್ನು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಅಭಿವೃದ್ಧಿಪಡಿಸಿ, ವಿದ್ಯಾರ್ಥಿಗಳ ನಿರೀಕ್ಷೆಯಂತೆ ಮೂಲಭೂತ ಅಗತ್ಯತೆಗಳನ್ನು ಒದಗಿಸಿ, ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಸೋಮವಾರ ಶಿವಮೊಗ್ಗ ನಗರದ ಸೀಗೆಹಟ್ಟಿ, ಕೆ.ಆರ್.ಪುರಂ ಮತ್ತು ಬಿ.ಬಿ.ಸ್ಟ್ರೀಟ್‌ನ ಸರ್ಕಾರಿ ಪ್ರಾಥಮಿಕ ಶಾಲೆಗಳ ವಿಕಾಸಕ್ಕೆ ದಾನಿಗಳಿಂದ ಆರ್ಥಿಕ ನೆರವು ಸೀÌಕರಿಸಿ ಮಾತನಾಡಿದರು. ಈಗಾಗಲೆ ಶಿವಮೊಗ್ಗ ನಗರದ ಒಟ್ಟು 87 ಸರ್ಕಾರಿ ಶಾಲೆಗಳಲ್ಲಿ 70 ಶಾಲೆಗಳನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಿ, ಸ್ಮಾರ್ಟ್‌ಕ್ಲಾಸ್‌ಗಳನ್ನು ನಿರ್ಮಿಸಲಾಗಿದೆ. ಉಳಿದಂತೆ 17 ಶಾಲೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೆ ಸರ್ಕಾರ ಕೈಗೊಂಡ ನಿರ್ಣಯದಂತೆ ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರು ತಮ್ಮ ಕಾರ್ಯಕ್ಷೇತ್ರದ 3 ಶಾಲೆಗಳನ್ನು, ಸಚಿವರು 5 ಶಾಲೆಗಳನ್ನು ಹಾಗೂ ಮುಖ್ಯಮಂತ್ರಿಗಳು 10 ಶಾಲೆಗಳನ್ನು ದತ್ತುಪಡೆದು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಶಾಲಾ ಕೊಠಡಿ, ಸಭಾಂಗಣ, ಕಾಂಪೌಂಡ್, ಗ್ರಂಥಾಲಯ, ಶೌಚಾಲಯ, ಕ್ರೀಡಾಂಗಣ, ಕೊಠಡಿ ಸೇರಿದಂತೆ ಎಲ್ಲಾ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಸೀಗೆಹಟ್ಟಿಯ ಸರ್ಕಾರಿ ಶಾಲೆಯನ್ನು ಬೆಂಗಳೂರಿನ ಜಿ.ವಿ.ಪಿ.ಆರ್. ಇಂಜಿನಿಯರ್ ಲಿ.ಸಂಸ್ಥೆಯವರು ತಮ್ಮ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲು ಆಸಕ್ತಿ ವಹಿಸಿದ್ದು, ಫೆ. 28ರಂದು ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗುವುದು. ಈ ಸಂಸ್ಥೆಯು ಈ ಶಾಲಾ ಕಟ್ಟಡದ ಅಭಿವೃದ್ಧಿ ಚಟುವಟಿಕೆಗಳಿಗಾಗಿ 50 ಲಕ್ಷ ರೂ.ಗಳನ್ನು ನೀಡಲು ಉದ್ದೇಶಿಸಿದ್ದು, ಅದರ ಮೊದಲ ಕಂತಿನ 25 ಲಕ್ಷ ರೂ. ಚೆಕ್ಕನ್ನು ಸಂಸ್ಥೆಯ ಮುಖ್ಯಸ್ಥ ಜಯಪ್ರಕಾಶ್ ಅವರು ತಮಗೆ ಹಸ್ತಾಂತರಿಸಿದ್ದಾರೆ. ಈ ಹಣ ಬಳಸಿ ಕೈಗೊಳ್ಳುವ ಎಲ್ಲಾ ಕಾಮಗಾರಿಗಳು ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳುವಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಶಾಲಾ ಮೇಲುಸ್ತುವಾರಿ ಸಮಿತಿಯ ಪದಾಧಿ ಕಾರಿಗಳು ಗಮನಹರಿಸುವಂತೆ ಸೂಚಿಸಿದರು.
ಕೆ.ಆರ್.ಪುರಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಸದರಿ ಶಾಲೆಯನ್ನು ಹೈದ್ರಾಬಾದ್‌ನ ಕೆ.ಎಂ.ವಿ. ಸಂಸ್ಥೆಯ ಮುಖ್ಯಸ್ಥ ಶ್ರೀಹರ್ಷ ಅವರು 50ಲಕ್ಷ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಆಸಕ್ತಿ ತೋರಿದ್ದಾರೆ. ಅವರು ನೀಡುವ ಈ ನಿಧಿಯಿಂದ ಶಾಲಾ ಅಗತ್ಯತೆಗಳನ್ನು ಮುಂದಿನ 2ತಿಂಗಳ ಅವಧಿಯೊಳಗಾಗಿ ಒದಗಿಸಲು, ಕಾಮಗಾರಿಗಳನ್ನು ಬೇಗ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಪೋಷಕರು ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ತೋರದೆ, ಉತ್ತಮ ಶೈಕ್ಷಣಿಕ ಸೌಲಭ್ಯ ಒಳಗೊಂಡ ಸರಕಾರಿ ಶಾಲೆಗಳಿಗೆ ಯಾವುದೇ ಆತಂಕವಿಲ್ಲದೆ ತಮ್ಮ ಮಕ್ಕಳನ್ನು ದಾಖಲಿಸಬೇಕು. ಪೋಷಕರ, ಶಿಕ್ಷಕರ ನಿರೀಕ್ಷೆಯಂತೆ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಂ. ರಮೇಶ್, ಗನ್ನಿ ಶಂಕರ್, ಜಯರಾಮ್, ಸುನಿತಾ ಅಣ್ಣಪ್ಪ ಸೇರಿದಂತೆ ಆಯಾ ಶಾಲೆಯ ಮೇಲುಸ್ತುವಾರಿ ಸಮಿತಿಗಳ ಅಧ್ಯಕ್ಷರು, ಪದಾಧಿ ಕಾರಿಗಳು, ಅಧಿ ಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.