ಹೊಸದಿಲ್ಲಿ: ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನಿರೀಕ್ಷಿತ ಭೇಟಿ ನೀಡಿದರು.
ಜನದಟ್ಟಣೆಯ ದೂರುಗಳ ಹಿನ್ನೆಲೆಯಲ್ಲಿ ಸಚಿವರು ಏರ್ ಪೋರ್ಟ್ ನ ಟರ್ಮಿನಲ್ 3ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಕೇಂದ್ರ ಸಚಿವರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಕೆಲವು ಸೂಚನೆಗಳನ್ನು ನೀಡಿದರು.
ಮೂಲಗಳ ಪ್ರಕಾರ, ತಪಾಸಣೆಯ ನಂತರ ಸಿಂಧಿಯಾ ದೆಹಲಿ ವಿಮಾನ ನಿಲ್ದಾಣದ ಕಚೇರಿಯ ಕೊಠಡಿಯಲ್ಲಿ ಎಲ್ಲಾ ಸ್ಟೇಕ್ ಹೋಲ್ಡರ್ ಗಳೊಂದಿಗೆ ಮಾತುಕತೆ ನಡೆಸಿ, ಅವರಿಗೆ ಪ್ರಮುಖ ನಿರ್ದೇಶನಗಳನ್ನು ನೀಡಲಾಗಿದೆ. ಮುಂದಿನ ಆರರಿಂದ ಏಳು ದಿನಗಳಲ್ಲಿ ವಿಮಾನ ನಿಲ್ದಾಣದಲ್ಲಿ ಕೆಲವು ಬದಲಾವಣೆಗಳು ಜಾರಿಗೆ ಬರಬಹುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಮನೆಯಲ್ಲೇ ಕುಳಿತು ಬೋರಾಗುತ್ತದೆಂದು ಪೊಲೀಸ್ ಟೋಪಿ ತೊಟ್ಟು ಕಳ್ಳತನಕ್ಕಿಳಿದ ವ್ಯಕ್ತಿ.!
ದಿಲ್ಲಿ ವಿಮಾನ ನಿಲ್ದಾಣದ ಜನ ದಟ್ಟಣೆಯ ಬಗ್ಗೆ ಬಹಳಷ್ಟು ಮಂದಿ ಪ್ರಯಾಣಿಕರು ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ತೋಡಿಕೊಂಡಿದ್ದರು. ಹೈ ವೇ ಆನ್ ಮೈ ಪ್ಲೇಟ್ ಕಾರ್ಯಕ್ರಮದ ನಿರೂಪಕ ರಾಕಿ ಸಿಂಗ್ ಅವರು ‘ನರಕಕ್ಕೆ ಸ್ವಾಗತ’ ಎಂಬ ಕ್ಯಾಪ್ಶನ್ ಬರೆದು ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಟ್ಯಾಗ್ ಮಾಡಿದ್ದರು.