Advertisement

ನವೀಕರಿಸಬಹುದಾದ ಇಂಧನ ನೀತಿಗೆ ಅಸ್ತು: ಸಚಿವ ಜೆ.ಸಿ.ಮಾಧುಸ್ವಾಮಿ

12:01 AM Feb 10, 2023 | Team Udayavani |

ಬೆಂಗಳೂರು: ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ-2027 ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಹೊಸದಾಗಿ ಸೋಲಾರ್‌ ಘಟಕ ಸ್ಥಾಪಿಸಲು ಈಗಿರುವ 3.5 ಎಕರೆ ಜಮೀನಿನ ಮಿತಿಯನ್ನು 4 ಎಕರೆಗೆ ವಿಸ್ತರಿಸಲಾಗಿದೆ. ಅದೇ ರೀತಿ ಪವನ ವಿದ್ಯುತ್‌ ಯೋಜನೆಗೆ ಅನುಮತಿ ಪಡೆದ ಕಾರ್ಯಾರಂಭ ಮಿತಿ ಮೂರು ವರ್ಷದಿಂದ ಎರಡು ವರ್ಷಕ್ಕೆ ಇಳಿಸಲಾಗಿದೆ.

Advertisement

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಪುನರ್‌ ನವೀಕರಿಸಬಹುದಾದ ಇಂಧನ ವಲಯದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಹಾಗೂ ಬಂಡವಾಳ ಹೂಡಿಕೆಗೆ ಮುಂದಾಗುವವರಿಗೆ ಅನುಕೂಲ ಕಲ್ಪಿಸಲು ನೂತನ ನೀತಿ ಜಾರಿಗೊಳಿಸಲಾಗುತ್ತಿದೆ. ಈ ಹಿಂದೆ 2022 ರವರೆಗೆ ನೀತಿ ರೂಪಿಸಲಾಗಿತ್ತು. ಇದೀಗ 2027 ರವರೆಗೆ ಐದು ವರ್ಷಗಳ ಅವಧಿಗೆ ಹೊಸ ನೀತಿ ರೂಪಿಸಲಾಗಿದೆ ಎಂದು ಹೇಳಿದರು.

ಮೊದಲ ಹಂತದಲ್ಲಿ ಉನ್ನತೀಕರಣ: ರಾಜ್ಯದ ಸರ್ಕಾರಿ ಐಟಿಐಗಳನ್ನು ಟಾಟಾ ಸಂಸ್ಥೆಯ ಸಹಭಾಗಿತ್ವದಲ್ಲಿ ಉನ್ನತೀಕರಣಗೊಳಿಸುವ 927 ಕೋಟಿ ರೂ. ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದ್ದು, 155 ಸರ್ಕಾರಿ ಐಟಿಐಗಳ ಪೈಕಿ 30 ಐಟಿಐಗಳನ್ನು ತಲಾ 27 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದಲ್ಲಿ ಉನ್ನತೀಕರಣ ಮಾಡಲಾಗುವುದು. ಯೋಜನೆಯಡಿ 816 ಕೋಟಿ ರೂ.ಗಳನ್ನು ಸಂಸ್ಥೆ ಭರಿಸಲಿದ್ದು ಉಳಿದ 111 ಕೋಟಿ ರೂ. ರಾಜ್ಯ ಸರ್ಕಾರ ಭರಿಸಲಿದೆ ಎಂದು ತಿಳಿಸಿದರು.

ಹಾವೇರಿ ಜಿಲ್ಲೆಯ ಹಿರೆಕೆರೂರಿನ ಸರ್ವಜ್ಞ ಪ್ರಾಧಿಕಾರದಿಂದ ಹಾವೇರಿ, ಹಿರೆಕೆರೂರು, ಮಾಸೂರು, ಅಬಲೂರು ಸೇರಿ ವಿವಿಧ ಗ್ರಾಮಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು 25 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು.

436 ಕೋಟಿ ರೂ. ಯೋಜನೆ: ಜಲಜೀವನ್‌ ಮಿಷನ್‌ ಯೋಜನೆಯಡಿ ಚಾಮರಾಜನಗರ, ಉತ್ತರ ಕನ್ನಡ, ಬೆಳಗಾವಿ, ಚಿತ್ರದುರ್ಗ ಜಿಲ್ಲೆಯ ಕೆಲವು ತಾಲೂಕುಗಳಿಗೆ ನೀರು ಒದಗಿಸಲು 436 ಕೋಟಿ ರೂ. ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ.

Advertisement

ಚಾಮರಾಜನಗರ ಜಿಲ್ಲೆಯ 166 ಗ್ರಾಮಗಳಿಗೆ ಜಲ ಜೀವನ್‌ ಮಿಷನ್‌ ಯೋಜನೆಯಡಿ ಕುಡಿಯುವ ನೀರು ಒದಗಿಸಲು 26 ಕೋಟಿ ರೂ., ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ 15 ಗ್ರಾಮಗಳಿಗೆ ಜಲ ಜೀವನ್‌ ಮಿಷನ್‌ ಯೋಜನೆಯಡಿ ಕುಡಿಯುವ ನೀರು ಒದಗಿಸಲು 28 ಕೋಟಿ ರೂ., ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೈನಾಪುರ ಸೇರಿ 12 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ 32 ಕೋಟಿ ರೂ., ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ನಗರ ಸೇರಿ 363 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ 350 ಕೋಟಿ ರೂ. ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಉತ್ತರ ಕನ್ನಡದ ಯಲ್ಲಾಪುರ ಹೋಬಳಿಯಲ್ಲಿ ಬುಡಕಟ್ಟು ಜನರಿಗೆ ವನವಾಸಿ ಶಾಲೆಗಾಗಿ 1 ಎಕರೆ ಜಮೀನು, ಕೊಡಗು ಜಿಲ್ಲೆಯಲ್ಲಿ ಹೊಸದಾಗಿ ಪೊಲೀಸ್‌ ವಸತಿ ಸಂಕೀರ್ಣ ನಿರ್ಮಾಣದ 12 ಕೋಟಿ ರೂ. ವೆಚ್ಚದ ಯೋಜನೆ ಹಾಗೂ ಕಲಬುರಗಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಬಸ್‌ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ಗದಗ ಜಿಲ್ಲೆಯಲ್ಲಿ ವೀರರಾಣಿ ಚನ್ನಮ್ಮ ಹೆಸರಿನ ಸಮುದಾಯ ಭವನ ನಿರ್ಮಾಣಕ್ಕೆ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ಗೆ ಎರಡು ಎಕರೆ ಜಮೀನು ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆಯಿಂದ 200 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲು 23 ಕೋಟಿ ರೂ., ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ 300 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಉಪಕರಣಗಳನ್ನು ಖರೀದಿಸಲು 24 ಕೋಟಿ ರೂ. ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ವಿವರಿಸಿದರು.

54.4 ಕೋಟಿ ರೂ. ಠೇವಣಿ
ಬೆಂಗಳೂರಿನ ಸಿಲ್ಕ್ ಬೋರ್ಡ್‌ ಜಂಕ್ಷನ್‌ ಬಳಿ ಟೋಲ್‌ ಘಟಕವನ್ನು ಒಡೆದು ಹಾಕಿರುವ ಬಗ್ಗೆ ತನಿಖೆ ನಡೆಸಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಈ ಬಗ್ಗೆ ಸುಪ್ರೀಂಕೋರ್ಟ್‌ನ ವಿಚಾರಣೆಗಾಗಿ 54.4 ಕೋಟಿ ರೂ. ಠೇವಣಿ ಇಡಲು ಸಂಪುಟ ಒಪ್ಪಿಗೆ ನೀಡಿದೆ. ರಾಯಚೂರಿನ ಹಗರಬೊಮ್ಮನಹಳ್ಳಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಕೃಷಿ ಕಾಲೇಜು ಸ್ಥಾಪಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ರಾಜ್ಯದಲ್ಲೇ ಪ್ರಥಮ ಎನ್ನುವಂತೆ ಸೊರಬ ತಾಲೂಕಿನಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರಲು 18 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಿಸುವ 49.66 ಕೋಟಿ ರೂ.ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಸರ್ಕಾರಿ ಟೂಲ್‌ ರೂಂ ಸ್ಥಾಪಿಸುವ 73.75 ಕೋಟಿ ರೂ. ಹಾಗೂ ನೆಲಗಾಳದಲ್ಲಿರುವ ಟೂಲ್‌ ರೂಂ 37.55 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಯೋಜನೆಗೂ ಸಂಪುಟ ಒಪ್ಪಿಗೆ ನೀಡಿದೆ ಎಂದು ವಿವರಿಸಿದರು.

ಸಿಎಂಗೆ ಅಧಿಕಾರ
ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಒಂದು ಸದಸ್ಯ ಸ್ಥಾನ ಭರ್ತಿ ಅಧಿಕಾರವನ್ನು ಸಂಪುಟ ಸಭೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next