Advertisement

94ಸಿ/ಸಿಸಿ ಹಕ್ಕುಪತ್ರ ವಿತರಣೆಗೆ ಶೀಘ್ರ ಕ್ರಮ: ಜಯಮಾಲಾ

09:19 AM Dec 09, 2018 | |

ಕೋಟ: ಕರಾವಳಿ ಭಾಗದಲ್ಲಿ 94ಸಿ ಹಾಗೂ 94ಸಿಸಿ ಹಕ್ಕು ಪತ್ರದ ಸಮಸ್ಯೆ ಸಾಕಷ್ಟಿದೆ. ಇದನ್ನು ಬಗೆಹರಿಸುವ ಸಲುವಾಗಿ ಅಧಿಕಾರಿಗಳ ಜತೆ ಈಗಾಗಲೇ ಚರ್ಚೆ ನಡೆಸಿದ್ದೇನೆ. ಹಕ್ಕುಪತ್ರ ವಿತರಣೆಗೆ ಶೀಘ್ರ ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವೆ ಡಾ| ಜಯಮಾಲಾ ತಿಳಿಸಿದರು.

Advertisement

ಅವರು ಶನಿವಾರ ಕೋಟ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಐಟಿಸೆಲ್‌ನ ಶಕ್ತಿ ಕಾರ್ಯಕ್ರಮದಲ್ಲಿ ಈ ವಿಚಾರ ತಿಳಿಸಿದರು.

ಆಡಳಿತ ಚುರುಕಿಗೆ ಜನಸಂಪರ್ಕ ಸಭೆ
ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸುವ ಸಲುವಾಗಿ ಜನಸಂಪರ್ಕ ಸಭೆ ನಡೆಸುವಂತೆ ಸಲಹೆ ಕೇಳಿಬಂದಿದೆ. ಈ ಕುರಿತು ಗಂಭೀರವಾದ ಚಿಂತನೆ ನಡೆಸಲಿದ್ದೇನೆ. ನನ್ನ ಮನಸ್ಸು ಜಿಲ್ಲೆಯ ಅಭಿವೃದ್ಧಿಗಾಗಿ ಸದಾ ತುಡಿಯುತ್ತಿರುತ್ತದೆ ಎಂದರು. ಪಂಚರಾಜ್ಯಗಳ ಚುನಾವಣೆಯ ಸಮೀಕ್ಷೆಯಲ್ಲಿ ಬಿಜೆಪಿ ಧೂಳೀಪಟವಾಗುವ ಲಕ್ಷಣಗಳು ಗೋಚರಿಸಿದ್ದು, ಇದು ಕಾಂಗ್ರೆಸ್‌ ಮತ್ತೆ ವಿಜೃಂಭಿಸುವ ಸೂಚನೆಯಾಗಿದೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಂಕರ್‌ ಕುಂದರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕರ್ತರೊಂದಿಗೆ ವಿವಿಧ ವಿಚಾರದ ಕುರಿತು ಚರ್ಚೆ ಹಾಗೂ ಐಟಿ ಸೆಲ್‌ ಬಲಪಡಿಸುವ ಕುರಿತು ಸಮಾಲೋಚನೆ ನಡೆಯಿತು.
ಶಾಸಕ ಪ್ರತಾಪ್‌ಚಂದ್ರ ಶೆಟ್ಟಿ, ಇಂಟೆಕ್‌ ರಾಜ್ಯಾಧ್ಯಕ್ಷ ರಾಕೇಶ್‌ ಮಲ್ಲಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಕೋಟ ಬ್ಲಾಕ್‌ ವೀಕ್ಷಕಿ ಮಮತಾ ಗಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಜಿ.ಎ. ಮೊದಿನ್‌ ಬಾವಾ, ಯುವ ಘಟಕದ ಅಧ್ಯಕ್ಷ ಇಚ್ಛಿತಾರ್ಥ ಶೆಟ್ಟಿ, ಐಟಿ ಸೆಲ್‌ ಅಧ್ಯಕ್ಷ ಶ್ರೀಕಾಂತ್‌ ಆಚಾರ್ಯ, ಚಂದ್ರಕಾಂತ್‌, ರೋಶಿನಿ ವಲ್ವೇರ ಉಪಸ್ಥಿತರಿದ್ದರು.
ಗಣೇಶ್‌ ಕೆ. ನೆಲ್ಲಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

“ರೈತರು ಬಯಸಿದ್ರೆ ಸಕ್ಕರೆ ಕಾರ್ಖಾನೆ ಮರುಜೀವ’ 
ಕೋಟ: ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಮರು ಜೀವ ನೀಡಲು ಸರಕಾರ ಉತ್ಸುಕವಾಗಿದೆ ಮತ್ತು ಈ ಕುರಿತು ಹಲವು ಸಭೆಗಳನ್ನು ನಡೆಸಲಾಗಿದೆ. ಆದರೆ ರೈತರಿಂದ ಎಷ್ಟರ ಮಟ್ಟಿಗೆ ಬೇಡಿಕೆ ಇದೆ ಎನ್ನುವುದನ್ನು ಅವಲಂಬಿಸಿ ಚಿಂತಿಸಲಾಗುವುದು ಎಂದು ಸಚಿವೆ ಡಾ| ಜಯಮಾಲಾ ತಿಳಿಸಿದರು. ಅವರು ಶನಿವಾರ ಕೋಟ ಬ್ಲಾಕ್‌ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದರು. ಸಕ್ಕರೆ ಕಾರ್ಖಾನೆ ಆರಂಭವಾದರೆ ಉದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಸಹಾಯಕವಾಗಲಿದೆ. ಆದರೆ ಅಗತ್ಯ ಪ್ರಮಾಣದಲ್ಲಿ ರೈತರು ಸಹಕಾರ ನೀಡದಿದ್ದರೆ ಕೋಟ್ಯಂತರ ರೂ. ತೊಡಗಿಸಿ ಪ್ರಯೋಜನವಿಲ್ಲ ಎಂದರು.

Advertisement

ಮರಳು ಸಮಸ್ಯೆಗೆ ಶೀಘ್ರ ಪರಿಹಾರ
ಮರಳು ಸಮಸ್ಯೆ ಬಗೆಹರಿಸುವ ಕುರಿತು ಈಗಾಗಲೇ ಸಾಕಷ್ಟು ಪ್ರಯತ್ನ ನಡೆಸಲಾಗಿದೆ. ಶೀಘ್ರದಲ್ಲಿ ಜಿಲ್ಲೆಯ ಅತೀ ಈ ದೊಡ್ಡ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

ಟೋಲ್‌ ವಿಚಾರದಲ್ಲಿ ಒತ್ತಡ ಹಾಕಬೇಡಿ
ಟೋಲ್‌ ವಸೂಲಿ ರಾಷ್ಟ್ರೀಯ ನೀತಿಯಾಗಿದ್ದು ರಿಯಾಯಿತಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಈ ವಿಚಾರದಲ್ಲಿ ರಾಜ್ಯ ಸರಕಾರ ಹಾಗೂ ಉಸ್ತುವಾರಿ ಸಚಿವರ ಮೇಲೆ ಒತ್ತಡ ಹಾಕುವುದು ಸರಿಯಲ್ಲ. ಸಂಸದರಿಗೆ ಈ ಸಮಸ್ಯೆಯನ್ನು ಪರಿಹರಿಸುವ ಅವಕಾಶವಿದೆ. ಆದ್ದರಿಂದ ಅವರನ್ನೇ ಕೇಳಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next