Advertisement

ಸಚಿವ ಜಮೀರ್‌ ಎಡವಟ್ಟು: BJP ತರಾಟೆ

12:03 AM Nov 18, 2023 | Team Udayavani |

ಬೆಂಗಳೂರು: ಮುಸ್ಲಿಂ ಸಮುದಾಯದ ಯು.ಟಿ. ಖಾದರ್‌ ಅವರನ್ನು ಸ್ಪೀಕರ್‌ ಮಾಡುವ ಮೂಲಕ ಬಿಜೆಪಿಯ ದೊಡ್ಡ ದೊಡ್ಡ ಶಾಸಕರೂ ಅವರಿಗೆ ನಮಸ್ಕರಿಸಿ ನಿಲ್ಲುವಂತೆ ಮಾಡಿದ್ದೇವೆ ಎನ್ನುವ ಮೂಲಕ ವಸತಿ ಸಚಿವ ಜಮೀರ್‌ ಖಾನ್‌ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

Advertisement

ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಭಾಷಣ ಮಾಡಿರುವ ಜಮೀರ್‌, ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್‌ ಪಕ್ಷ ಹೆಚ್ಚಿನ ಆದ್ಯತೆ ನೀಡುತ್ತಿದೆ ಎನ್ನುವುದನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

ಇದಕ್ಕೆ ವಿಪಕ್ಷ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಗದ್ವೇಷ ಇರುವ ಇಂತಹವರು ಸಚಿವ ಸ್ಥಾನದಲ್ಲಿ ಮುಂದುವರಿಯಬಾರದು. ಅವರೇ ರಾಜೀನಾಮೆ ಕೊಡಬೇಕು, ಇಲ್ಲದಿದ್ದರೆ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂಬಂಧ ಸ್ಪಷ್ಟನೆ ನೀಡಿರುವ ಸಚಿವ ಜಮೀರ್‌, ತೆಲಂಗಾಣ ಚುನಾವಣೆಯ ತಾರಾ ಪ್ರಚಾರಕನಾದ ನಾನು ಹೈದರಾಬಾದ್‌ನಲ್ಲಿ ಯಾವುದೇ ವ್ಯಕ್ತಿ ಅಥವಾ ಪಕ್ಷದ ಶಾಸಕರ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ. ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್‌ ಪಕ್ಷವು ಅತ್ಯುನ್ನತ ಗೌರವ ನೀಡಿದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಪೀಕರ್‌ ಸ್ಥಾನ ನೀಡಿದೆ. ಎಲ್ಲ ಪಕ್ಷದವರೂ ಅವರನ್ನು “ಸನ್ಮಾನ್ಯ ಸಭಾಧ್ಯಕ್ಷರೇ’ ಎನ್ನುತ್ತೇವೆ. ಅಷ್ಟೊಂದು ಉನ್ನತ ಹುದ್ದೆಗೆ ಏರುವ ಅವಕಾಶ ನೀಡಲಾಗಿದೆ ಎಂದಿದ್ದಾರೆ.

ಜಮೀರ್‌ ಹೇಳಿದ್ದೇನು?
“ನಾವು 9 ಮುಸ್ಲಿಂ ಶಾಸಕರು ಗೆದ್ದಿದ್ದು, ಈ ಪೈಕಿ ಐವರಿಗೆ ಅಧಿಕಾರ ಕೊಡಲಾಗಿದೆ. ಜಮೀರ್‌, ರಹೀಂ ಖಾನ್‌ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಸಲೀಂ ಅಹ್ಮದ್‌ರನ್ನು ಮುಖ್ಯ ಸಚೇತಕ ಮಾಡಲಾಗಿದೆ. ನಜೀರ್‌ ಅಹಮದ್‌ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಮಾಡಲಾಗಿದೆ. ಇದುವರೆಗೆ ಕರ್ನಾಟಕದ ಇತಿಹಾಸದಲ್ಲಿ ಯಾವುದೇ ಮುಸ್ಲಿಂ ನಾಯಕನನ್ನು ಸ್ಪೀಕರ್‌ ಮಾಡಿರಲಿಲ್ಲ. ಯು.ಟಿ.ಖಾದರ್‌ ಅವರನ್ನು ಸ್ಪೀಕರ್‌ ಮಾಡಲಾಗಿದೆ. ಬಿಜೆಪಿ ನಾಯಕರು ನಮ್ಮ ಯು.ಟಿ. ಖಾದರ್‌ ಎದುರು ನಮಸ್ಕಾರ ಮಾಡುತ್ತಾ ನಿಲ್ಲಬೇಕು. ಇದನ್ನು ಮಾಡಿದ್ಯಾರು? ಕಾಂಗ್ರೆಸ್‌..’ ಎಂದು ತೆಲಂಗಾಣದಲ್ಲಿ ಸಚಿವ ಜಮೀರ್‌ ಭಾಷಣ ಮಾಡಿದ್ದರು.

Advertisement

ಹಲವರು ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ವಿವಾದದ ಸ್ವರೂಪ ನೀಡುತ್ತಿದ್ದಾರೆ. ಕಾಂಗ್ರೆಸ್‌ ಮುಸ್ಲಿಂ ಸಮುದಾಯಕ್ಕೆ ಎರಡು ಸಚಿವ ಸ್ಥಾನ, ಪರಿಷತ್‌ನಲ್ಲಿ ಮುಖ್ಯ ಸಚೇತಕ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸ್ಪೀಕರ್‌ ಸ್ಥಾನ ನೀಡಿದೆ ಎಂದಷ್ಟೇ ಹೇಳಿದ್ದೇನೆ. ಕಾಂಗ್ರೆಸ್‌ ಪಕ್ಷ ನಮ್ಮ ಸಮಾಜಕ್ಕೆ ನೀಡಿರುವ ಗೌರವ ಸ್ಮರಿಸುವುದು ತಪ್ಪೇ? –ಜಮೀರ್‌ ಖಾನ್‌, ವಸತಿ ಸಚಿವ

ಜಮೀರ್‌ ಅವರು ಏನು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಯಾವ ಅರ್ಥದಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ಆ ಬಗ್ಗೆ ತಿಳಿಯದೆ ಪ್ರತಿಕ್ರಿಯಿಸುವುದು ತಪ್ಪಾಗುತ್ತದೆ. ಅವರ ಹೇಳಿಕೆಯನ್ನು ನಾನು ಗಮನಿಸಿಲ್ಲ. ತಿಳಿದ ಬಳಿಕ ಮಾತನಾಡುತ್ತೇನೆ. –ಡಾ| ಜಿ. ಪರಮೇಶ್ವರ್‌, ಗೃಹ ಸಚಿವ

ಜಮೀರ್‌ ಅವರು ಸಚಿವರಾಗಿ ಕಾರ್ಯ ನಿರ್ವಹಿಸಬೇಕಿತ್ತು. ಬದಲಿಗೆ ಒಂದು ಸಮುದಾಯದ ಪರವಾಗಿ ಮಾತನಾಡಿದ್ದು ಅಕ್ಷಮ್ಯ. ಯು.ಟಿ. ಖಾದರ್‌ ಎಂಬ ಕಾರಣಕ್ಕೆ, ಒಂದು ಸಮುದಾಯಕ್ಕೆ, ಮುಸಲ್ಮಾನ ಎನ್ನುವ ಕಾರಣಕ್ಕೆ ತಲೆ ಬಾಗುವುದಲ್ಲ. ಆಡಳಿತ-ವಿಪಕ್ಷಗಳನ್ನು ಸಮಾನವಾಗಿ ತೆಗೆದುಕೊಂಡು ಹೋಗುವ ಆ ಪೀಠಕ್ಕೆ ಬೆಲೆ ಕೊಡುತ್ತೇವೆ. –ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ

ಧರ್ಮಾಧಾರಿತವಾಗಿ ಮುಸ್ಲಿಂಗೆ ಹಿಂದೂಗಳು ನಮಸ್ಕರಿಸುವಂತೆ ಮಾಡಿದ್ದೇವೆ ಎನ್ನುವುದು ದಬ್ಟಾಳಿಕೆಯ ಮನಸ್ಥಿತಿ. ಇಂತಹ ಕೀಳುಮಟ್ಟದ ಕಲ್ಪನೆ, ಹೇಳಿಕೆ ನೀಡುವ ಮೂಲಕ ಮುಸಲ್ಮಾನ ಸಮುದಾಯ ಮತ್ತು ಸರಕಾರಕ್ಕೆ ಮುಜುಗರ, ಕಳಂಕ ಹಚ್ಚಿದ್ದಾರೆ. ಜಮೀರ್‌ ರಾಜೀನಾಮೆ ಕೊಡಬೇಕು. ಸೂಕ್ತ. ಸಂಪುಟದಿಂದ ವಜಾಗೊಳಿಸ ಬೇಕು. –ಡಾ|ಸಿ.ಎನ್‌. ಅಶ್ವತ್ಥನಾರಾಯಣ, ಮಾಜಿ ಡಿಸಿಎಂ

ಸಭಾಧ್ಯಕ್ಷರ ಪೀಠದಲ್ಲಿ ಇರುವವರಿಗೆ ಕೊಡುವ ಗೌರವವೇ ಹೊರತು ವ್ಯಕ್ತಿಗಲ್ಲ. ಪ್ರಜಾಪ್ರಭುತ್ವಕ್ಕೆ ಕೊಡುವ ಗೌರವ ಅದು. ಜಮೀರ್‌ ಖಾನ್‌ ಅವರು ಒಂದು ಕೋಮಿನ ಉಸ್ತುವಾರಿ ತೆಗೆದುಕೊಂಡವರಲ್ಲ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರ ಬಾಯಲ್ಲಿ ಇಂತಹ ಮಾತು ದುರದೃಷ್ಟ ಮತ್ತು ಖಂಡನೀಯ. ಅಂತರಾಳವನ್ನು ಬಹಿರಂಗಪಡಿಸಿದ್ದಾರೆ. ಇನ್ನಾದರೂ ಎಚ್ಚರಿಕೆಯಿಂದ ಮಾತನಾಡಿ.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಜಮೀರ್‌ ಅವರು ಸಂವಿಧಾನಕ್ಕೆ ಅಗೌರವ ನೀಡುವ ಹೇಳಿಕೆ ಕೊಟ್ಟಿದ್ದಾರೆ. ಅವರನ್ನು ಕರೆದು ಸಿಎಂ ಬುದ್ಧಿಮಾತು ಹೇಳಬೇಕು. ನಾವೆಲ್ಲರೂ ಪೀಠಕ್ಕೆ ಗೌರವಿಸುತ್ತೇವೆ ಹೊರತು ವ್ಯಕ್ತಿಗತವಾಗಿ ನಮಸ್ಕರಿಸುವುದಿಲ್ಲ.
-ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next