ವಿಧಾನಸಭೆ: ಈ ಬಾರಿ ಮಳೆ ಪ್ರವಾಹದಿಂದ ಅನೇಕ ಕಡೆ ನದಿ ದಂಡೆಗಳ ಕೊರತೆ ಉಂಟಾಗಿದ್ದು, ಅದರ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಷ್ಟೊಂದು ಸುಲಭವಲ್ಲ. ಇದಕ್ಕೆ ಏನು ಪರಿಹಾರ ಕಂಡುಕೊಳ್ಳಬೇಕು, ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ತಮ್ಮ ಕ್ಷೇತ್ರದಲ್ಲಿ ವಾಡಿಕೆಗಿಂತ 10 ಪಟ್ಟು ಹೆಚ್ಚು ಮಳೆ ಬಿದ್ದಿದೆ, ಅಪಾರ ಪ್ರಮಾಣ ಆಸ್ತಿ-ಪಾಸ್ತಿ, ಬೆಳೆ ನಾಶವಾಗಿದೆ, ಪ್ರಾಣ ಹಾನಿ ಉಂಟಾಗಿದೆ. ದೊಡ್ಡ ಮಟ್ಟದಲ್ಲಿ ನದಿ ದಂಡೆಗಳ ಕೊರೆತ ಉಂಟಾಗಿದೆ. ನದಿ ದಂಡೆಗಳ ಕೊರೆತ ತಪ್ಪಿಸಲು ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವರು, ಬೈಂದೂರು ವಿಧಾನಸಭಾ ಕ್ಷೇತ್ರದ ವಾ¤ಪ್ತಿಯಲ್ಲಿ ಭಾರಿ ಮಳೆ ಪ್ರವಾಹದಿಂದ ನದಿದಂಡೆಗಳ ಕೊರತೆ ಉಂಟಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ರಾಜ್ಯದ ಬೇರೆ ಕಡೆಗಳಲ್ಲೂ ಈ ಸಮಸ್ಯೆ ಆಗಿದೆ. ನದಿದಂಡೆಗಳ ಕೊರೆತ ತಡೆಗಟ್ಟಲು ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 21 ಕಾಮಗಾರಿಗಳಿಗೆ 22.85 ಕೋಟಿ ರೂ. ಅನುದಾನ ನೀಡಲಾಗಿದೆ. ಜಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ 30 ನದಿದಂಡೆ ಸಂರಕ್ಷಣಾ ಕಾಮಗಾರಿಗಳ ಪ್ರಸ್ತಾವನೆ ಬಂದಿವೆ. ಅವುಗಳ ಅಂದಾಜು ಮೊತ್ತ 59.91 ಕೋಟಿ ರೂ. ಆಗಿದೆ.
ಇದಲ್ಲದೇ ಮೂರು ತಾಲೂಕುಗಳಲ್ಲಿ 300 ಕೋಟಿ ವೆಚ್ಚದಲ್ಲಿ ಖಾರ್‌ಲ್ಯಾಂಡ್ ಯೋಜನೆ ಜಾರಿಗೆ ತರಲಾಗಿದೆ. ಅದನ್ನು ಇನ್ನಷ್ಟು ಕಡೆ ವಿಸ್ತರಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ನದಿದಂಡೆಗಳ ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಷ್ಟೊಂದು ಸುಲಭವಲ್ಲ. ಆದಾಗ್ಯೂ, ಬೈಂದೂರು ಶಾಸಕರ ಬೇಡಿಕೆ ಸೇರಿದಂತೆ ರಾಜ್ಯದ ಇತರೆ ಕಡೆಗಳಲ್ಲಿ ನದಿ ದಂಡೆಗಳ ಕೊರತೆ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಜನಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಸಚಿವ ಮಾಧುಸ್ವಾಮಿ ಭರಸವೆ ನೀಡಿದರು.