Advertisement

ತ್ವರಿತವಾಗಿ ಬೂಸ್ಟರ್‌ ಡೋಸ್‌ ನೀಡಲು ಸಚಿವರ ಸೂಚನೆ

05:47 PM Mar 01, 2022 | Team Udayavani |

ಹುಬ್ಬಳ್ಳಿ: ಕೋವಿಡ್‌ ನಿಯಂತ್ರಣಕ್ಕೆ ಲಸಿಕಾಕರಣ ಅತ್ಯಗತ್ಯ ಕ್ರಮವಾಗಿದೆ. ಎರಡನೇ ಡೋಸ್‌ ಹಾಗೂ ಬೂಸ್ಟರ್‌ ಡೋಸ್‌ ಕೂಡ ಅರ್ಹ ಎಲ್ಲಾ ಜನರಿಗೆ ತ್ವರಿತವಾಗಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

Advertisement

ಪ್ರವಾಸಿ ಮಂದಿರದಲ್ಲಿ ಸೋಮವಾರ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ ನಿರೋಧಕ ಎರಡನೇ ಡೋಸ್‌ ಲಸಿಕೆ ಶೇ. 95.02 ಹಾಗೂ ಬೂಸ್ಟರ್‌ ಡೋಸ್‌ ಶೇ. 63.2 ಲಸಿಕೆಗಳನ್ನು ನೀಡಿರುವುದು ಉತ್ತಮ ಪ್ರಗತಿಯಾಗಿದೆ. ಸಾಧ್ಯವಾದಷ್ಟು ತ್ವರಿತವಾಗಿ ಅರ್ಹರೆಲ್ಲರಿಗೂ ಲಸಿಕೆ ನೀಡಿ ಕೋವಿಡ್‌ ನಿಯಂತ್ರಣಕ್ಕೆ ಶ್ರಮಿಸಬೇಕು ಎಂದರು.

ಜಿಲ್ಲೆಯ ಸಖೀ ಒನ್‌ ಸ್ಟಾಪ್‌ ಸೆಂಟರ್‌ ಕಿಮ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಗೆ ಒಂದೇ ಕೇಂದ್ರ ನಡೆಸಲು ಅವಕಾಶವಿದೆ. ಧಾರವಾಡ ಜಿಲ್ಲಾಸ್ಪತ್ರೆಯ ಪ್ರಕರಣಗಳಿಗೂ ನ್ಯಾಯಯುತ ಸಲಹೆ, ಮಾರ್ಗದರ್ಶನ ಸಿಗುವಂತೆ ನೋಡಿಕೊಳ್ಳಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಡಿ ಸರಕಾರದ ಸೌಲಭ್ಯಗಳನ್ನು ಅರ್ಹರಿಗೆ, ಬಡವರಿಗೆ ತಲುಪುವಂತೆ ಎಚ್ಚರ ವಹಿಸಬೇಕು. ರಾಜಕೀಯ ಹಾಗೂ ಇತರೆ ಪ್ರಭಾವಗಳಿಗೆ ಮಣಿದು ಫಲಾನುಭವಿಗಳನ್ನು ಆಯ್ಕೆ ಮಾಡಬಾರದು.ಇದರಿಂದ ಸರಕಾರದ ಉದ್ದೇಶ ಈಡೇರಿಕೆಗೆ ಧಕ್ಕೆಯಾಗುತ್ತದೆ. ಅದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಸೂಚಿಸಿದರು.

ಜಲಜೀವನ್‌ ಮಿಷನ್‌ ಹಾಗೂ ಜಲಧಾರೆ ಯೋಜನೆಯಡಿ ಜಿಲ್ಲೆಯ ಎಲ್ಲಾ ಜನವಸತಿಗಳಿಗೆ ಕುಡಿಯುವ ನೀರು ಪೂರೈಸಲು ನಡೆಯುತ್ತಿರುವ ಕಾಮಗಾರಿಗಳನ್ನು ನಿಖರವಾಗಿ ಉಸ್ತುವಾರಿ ಮಾಡಬೇಕು. ಮನೆ ಮನೆಗೆ ನಳಗಳ ಸಂಪರ್ಕ ಕಲ್ಪಿಸಲು ಪೈಪ್‌ ಹಾಕುವಾಗ ಕಾಂಕ್ರೀಟ್‌ ರಸ್ತೆಗಳನ್ನು ಅಗೆಯುತ್ತಾರೆ. ಕಾಮಗಾರಿ ಪೂರ್ಣಗೊಂಡ ನಂತರ ಅವುಗಳನ್ನು ಸರಿಪಡಿಸದೇ ಗುತ್ತಿಗೆದಾರರು ಹಾಗೇ ಬಿಡುತ್ತಾರೆ. ಇಲಾಖೆಯ ಎಂಜಿನಿಯರ್‌ ಗಳು, ಪಿಡಿಒಗಳು ಗಮನಹರಿಸಿ ಹಳ್ಳಿಗಳ ಮೂಲಸೌಕರ್ಯಗಳ ಗುಣಮಟ್ಟ, ಪರಿಪೂರ್ಣತೆ ಖಚಿತಪಡಿಸಿಕೊಂಡು ಪ್ರಮಾಣಪತ್ರ ನೀಡಬೇಕು ಎಂದರು.

ಜಿಪಂ ಸಿಇಒ ಡಾ| ಸುರೇಶ ಇಟ್ನಾಳ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ| ಬಿ. ಗೋಪಾಲಕೃಷ್ಣ, ಕಿಮ್ಸ್‌ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ, ಡಿಮ್ಹಾನ್ಸ್‌ ನಿರ್ದೇಶಕ ಡಾ| ಮಹೇಶ ದೇಸಾಯಿ, ಉಪವಿಭಾಗಾಧಿಕಾರಿ ಅಶೋಕ ತೇಲಿ, ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಐ.ಬಿ., ತೋಟಗಾರಿಕೆ ಉಪನಿರ್ದೇಶಕ ಕಾಶೀನಾಥ ಭದ್ರಣ್ಣವರ, ಲೋಕೋಪಯೋಗಿ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಬಿ. ಚೌಡಣ್ಣವರ ಇನ್ನಿತರರಿದ್ದರು.

Advertisement

ಅವಳಿನಗರದಲ್ಲಿ ಆಸ್ತಿಗಳ ಖಾತೆದಾರರಿಗೆ ಅಗತ್ಯ ಪತ್ರಗಳನ್ನು ವಿತರಿಸಲು ಇ-ಆಸ್ತಿ ಕಾರ್ಯಕ್ರಮವನ್ನು ಸರಳೀಕರಿಸಿ, ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ ನಾಲ್ಕು ಎಂಎಸ್‌ಪಿಸಿಗಳು ಅಂಗನವಾಡಿಗಳಿಗೆ ಆಹಾರಧಾನ್ಯ ಪೂರೈಸುತ್ತಿವೆ. ಪ್ರತಿ ತಾಲೂಕಿಗೆ ಒಂದರಂತೆ ಸ್ಥಾಪಿಸಲು ಇನ್ನು 4 ಕೇಂದ್ರಗಳ ಅಗತ್ಯವಿದೆ. ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ
ನಿತೇಶ ಪಾಟೀಲ, ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಪಲ್ಸ್‌ ಪೋಲಿಯೋ ಕಾರ್ಯಕ್ರಮ ನಡೆಯುತ್ತಿದೆ. ಮೊದಲ ದಿನವಾದ ಫೆ. 27ರಂದು 1.96 ಲಕ್ಷ ಮಕ್ಕಳಿಗೆ ಲಸಿಕೆ ನೀಡಿ ಶೇ.92 ಪ್ರಗತಿ ಸಾಧಿಸಲಾಗಿದೆ. ಮಾ. 2ರ ವರೆಗೆ ಲಸಿಕೆ ಆಂದೋಲನ ನಡೆಯಲಿದೆ.
ಡಾ| ಬಿ.ಸಿ. ಕರಿಗೌಡರ, ಜಿಲ್ಲಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next