ಶಿವಮೊಗ್ಗ: ‘ರಾಜ್ಯದ ಜನರ ಆಶೀರ್ವಾದ ಹಾಗೂ ಸಿಎಂ ಸಿದ್ದರಾಮಯ್ಯ ,ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಆಶೀರ್ವಾದದಿಂದ ಸಚಿವೆಯಾಗಿದ್ದೇನೆ’ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ.
ಭದ್ರಾವತಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಹೆಬ್ಬಾಳ್ಕರ್, ‘ನಾನು ಸಚಿವೆಯಾದ ಬಳಿಕ ಇದೇ ಮೊದಲ ಬಾರಿಗೆ ಭದ್ರಾವತಿಗೆ ಬಂದಿದ್ದೇನೆ.ಕಳೆದ ವಾರ ಮೊಮ್ಮಗಳು ಹುಟ್ಟಿದ್ದಳು, ಸೊಸೆ ಹಾಗೂ ಮಗುವನ್ನು ನೋಡಲು ಬಂದಿದ್ದೇನೆ.ಇಲ್ಲಿಯ ಜನರು ಅದ್ದೂರಿ ಸ್ವಾಗತ ಕೋರಿದ್ದಾರೆ’ ಎಂದರು.
ಗೃಹಲಕ್ಷ್ಮೀ ಯೋಜನೆ ಪ್ರತಾಪ್ ಸಿಂಹ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಪ್ರತಾಪ್ ಸಿಂಹ ಅಣ್ಣನವರು ಬಹಳ ಬುದ್ಧಿವಂತರು. ಅವರು ಸರ್ವಜ್ಞ ಇದ್ದಂತೆ. ಅವರ ಚಿಂತನೆಗಳಿಗೆ ಸರಿಸಾಟಿಯಾಗುವ ರಾಜಕಾರಣಿಗಳು ರಾಜ್ಯ ಹಾಗೂ ದೇಶದಲ್ಲಿ ಇಲ್ಲ.ಜನರು ಅವರನ್ನು ಸುಮ್ಮನೆ ಕೂರಿಸುವುದಕ್ಕೆ ನಮಗೆ ಅಧಿಕಾರ ಕೊಟ್ಟಿದ್ದಾರೆ. ಗೃಹಲಕ್ಷ್ಮೀ ಯೋಜನೆ ಎಲ್ಲರಿಗೂ ತಲುಪುತ್ತದೆ.ಯಾವುದೇ ಕುಟುಂಬಗಳನ್ನು ಒಡೆಯುವ ಕೆಲಸ ನಮ್ಮ ಸರ್ಕಾರ ಮಾಡುವುದಿಲ್ಲ.ಯೋಜನೆಯ ಫಾರ್ಮ್ ಗಳನ್ನು ಎಲ್ಲರಿಗೂ ವಿತರಿಸಲಾಗುತ್ತದೆ’ಎಂದರು.
‘ರಾಜ್ಯದಲ್ಲಿ 88% ಜನ ಬಿಪಿಎಲ್ & ಎಪಿಎಲ್ ಕಾರ್ಡ್ ಹೋಲ್ಡರ್ ಇದ್ದಾರೆ. ಅವರ ಅಂಕಿ ಅಂಶಗಳನ್ನು ತೆಗೆದುಕೊಂಡು ರಾಜ್ಯ ಸರ್ಕಾರ ಅವರಿಗೆ ಗೃಹಲಕ್ಷ್ಮೀ ಯೋಜನೆ ವಿಸ್ತರಿಸಲಾಗುತ್ತದೆ. ಅದಕ್ಕೆ ಕೆಲವು ಸಮಯಗಳು ಬೇಕಾಗುತ್ತದೆ ಆ ಕಾರಣದಿಂದ ಸ್ವಲ್ಪ ವಿಳಂಬವಾಗುತ್ತಿದೆ’ ಎಂದರು.
Related Articles
ಹಿಂದಿನ ಸರ್ಕಾರದ ಎಲ್ಲಾ ಹಗರಣಗಳನ್ನು ನಮ್ಮ ಸರ್ಕಾರದಲ್ಲಿ ತನಿಖೆ ಮಾಡಲಾಗುತ್ತದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಈ ವಿಚಾರವನ್ನು ಕ್ಯಾಬಿನೆಟ್ ನಲ್ಲಿ ಚರ್ಚಿಸಲಾಗುತ್ತದೆ. ನಾವು 40% ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಿ ಅಧಿಕಾರ ಬಂದಿದ್ದೇವೆ. ಭ್ರಷ್ಟಾಚಾರ, ಬೆಲೆ ಏರಿಕೆ ತೆಗೆಯುವುದೇ ಕಾಂಗ್ರೆಸ್ ಸರ್ಕಾರದ ಉದ್ದೇಶ. ರಾಜ್ಯದ ಜನರ ಮನದಲ್ಲಿ ಮಂದಹಾಸ ಮೂಡಿಸುವುದಕ್ಕೆ ನಮ್ಮ ಸರ್ಕಾರದ ಯೋಜನೆಗಳು ಜಾರಿಗೆ ತರುತ್ತವೆ’ ಎಂದರು.
‘ಕಳಪೆ ಗುಣಮಟ್ಟದ ಮೊಟ್ಟೆ ವಿತರಣೆ ಆರೋಪದ ಕುರಿತಾಗಿ ನಮ್ಮ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಈಗಾಗಲೇ ಅನುಭವಸ್ಥರ ಜತೆ ಕುಳಿತುಕೊಂಡು ಈ ಇಲಾಖೆ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ನಮ್ಮ ಇಲಾಖೆ ರಾಜ್ಯದ 60% ಪರ್ಸೆಂಟ್ ಜನರಿಗೆ ತಲುಪುತ್ತದೆ.ಗುಣಮಟ್ಟದ ಆಹಾರ ಪೂರೈಕೆ ಮಾಡುವುದು ನಮ್ಮ ಗುರಿ’ ಎಂದರು.
‘ಇಲಾಖೆಯಲ್ಲಿ ಎಲ್ಲೆಲ್ಲಿ ನ್ಯೂನತೆಗಳಿವೆ ಅದನ್ನು ಸರಿ ಮಾಡುತ್ತೇವೆ.ಇಲಾಖೆಯಲ್ಲಿ ಸೋರುವಿಕೆಯನ್ನು ತಡೆಗಟ್ಟಿ ನಾವು ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡುವತ್ತ ಗಮನಹರಿಸುತ್ತೇವೆ. ನಮ್ಮ ಸರ್ಕಾರ ಪೌಷ್ಟಿಕತೆ, ಉತ್ತಮ ಆರೋಗ್ಯ ಕಡೆ ಗಮನವನ್ನು ಕೊಡುತ್ತೇವೆ’ ಎಂದರು.
‘ಸಿದ್ದರಾಮಯ್ಯನವರೇ 5 ವರ್ಷಗಳ ಕಾಲ ಸಿಎಂ ಆಗುತ್ತಾರೆ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಇದನ್ನು ನೀವು ನಮ್ಮ ವರಿಷ್ಠರಿಗೆ ಕೇಳಬೇಕು.ಆ ವಿಚಾರವನ್ನು ನಮ್ಮ ಹೈಕಮಾಂಡ್ ನೋಡಿಕೊಳ್ಳುತ್ತದೆ’ ಎಂದರು.