Advertisement
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಎಸ್. ರುದ್ರೇಗೌಡ ಪ್ರಶ್ನೆಗೆ ಇಂಧನ ಸಚಿವರ ಪರವಾಗಿ ಉತ್ತರಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಸಮಸ್ಯೆಯಿಲ್ಲ. ವಿದ್ಯುತ್ ಪ್ರಸರಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಬೇಕಿದೆ ಎಂದರು.
ವ್ಯವಸ್ಥೆಯಲ್ಲಿನ ಲೋಪಗಳಿಂದಾಗಿ ವಿದ್ಯುತ್ ಪ್ರಸರಣದಲ್ಲಿ ನಷ್ಟ ಉಂಟಾಗುತ್ತಿದೆ. ಆದರೆ, ಈ ನಷ್ಟ ಪ್ರಮಾಣ ಕ್ರಮೇಣ ಇಳಿಕೆಯಾಗಿದೆ. 2018-19ರಲ್ಲಿ ಇದ್ದ ಶೇ. 3.161 ವಿದ್ಯುತ್ ಪ್ರಸರಣ ನಷ್ಟ ಪ್ರಮಾಣ 2021-22ರಲ್ಲಿ ಶೇ. 2.972ಕ್ಕೆ ಇಳಿಕೆಯಾಗಿದೆ. ವಿದ್ಯುತ್ ಕಳ್ಳತನ ಪ್ರಮಾಣ ಸಹ ಕಡಿಮೆಯಾಗಿದೆ ಎಂದರು. ವ್ಯವಸ್ಥೆ ಸುಧಾರಣೆ
ವಿದ್ಯುತ್ ನಷ್ಟ ಕಡಿಮೆ ಮಾಡಲು ಹೊಸ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ, ಹೊಸ ವಿದ್ಯುತ್ ಪ್ರಸರಣ ಮಾರ್ಗಗಳ ನಿರ್ಮಾಣ, ವಿದ್ಯುತ್ ಉಪಕೇಂದ್ರಗಳಲ್ಲಿ ಪರಿವರ್ತಕಗಳ ಸಾಮರ್ಥ್ಯ ಹೆಚ್ಚಳ, ಹಳೆಯ ವಾಹಕಗಳ ಬಲವರ್ಧನೆ ಮತ್ತು ಬದಲಾವಣೆ ಮತ್ತು ವಿದ್ಯುತ್ ಉಪಕೇಂದ್ರಗಳ ನಡುವೆ ಲಿಂಕ್ ಲೈನ್‌ಗಳನ್ನು ಸೃಷ್ಟಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರ 8 ಸಾವಿರ ಕೋಟಿ ರೂ. ಅನುದಾನ ನೀಡಿದೆ ಎಂದು ಸಚಿವರು ತಿಳಿಸಿದರು.