Advertisement

ಉದಯವಾಣಿ ವರದಿಗೆ ಬಸ್‌ ಸೌಲಭ್ಯ ಕಲ್ಪಿಸಿದ ಸಚಿವರು

06:30 AM Jul 12, 2018 | Team Udayavani |

ಚಾಮರಾಜನಗರ: ಜಿಲ್ಲೆಯ ಗರಗನಹಳ್ಳಿಯಿಂದ ಅಗತಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಮಯಕ್ಕೆ ಬಸ್‌ ಇಲ್ಲದೇ ವಿದ್ಯಾರ್ಥಿಗಳು 5 ಕಿ.ಮೀ. ನಡೆದು ಹೋಗ ಬೇಕಾಗಿದೆ ಎಂಬ ಉದಯವಾಣಿ ವರದಿ ಓದಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು, ಕ್ರಮ ಕೈಗೊಂಡು ಒಂದೇ ದಿನದಲ್ಲಿ ಬಸ್‌ ಸೌಲಭ್ಯ ಕಲ್ಪಿಸಿದ್ದಾರೆ.

Advertisement

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗರಗನ ಹಳ್ಳಿಯಿಂದ 5ನೇ ತರಗತಿ ನಂತರದ ತರಗತಿ ಗಳ ಒಟ್ಟು 25 ವಿದ್ಯಾರ್ಥಿಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಲು ಒಟ್ಟು 5 ಕಿ.ಮೀ. ದೂರ ನಡೆಯಬೇಕಾಗಿದೆ ಎಂಬ ವರದಿ ಜು.10ರ ಉದಯವಾಣಿಯಲ್ಲಿ ಪ್ರಕಟವಾಗಿತ್ತು. ಈ ವರದಿ ಓದಿದ ಸಾರಿಗೆ ಸಚಿವರು ತಕ್ಷಣ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಕರೆ ಮಾಡಿ, ಗರಗನಹಳ್ಳಿಯಿಂದ ಅಗತಗೌಡನಹಳ್ಳಿಗೆ ಶಾಲಾ ಸಮಯಕ್ಕೆ ಬಸ್‌ ಸೌಲಭ್ಯ ಕಲ್ಪಿಸಿ, ತಮಗೆ ವರದಿ ನೀಡುವಂತೆ ಸೂಚಿಸಿದ್ದಾರೆ.

ಸಚಿವರ ಆದೇಶದಂತೆ, ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ ಕುಮಾರ್‌ ಹಾಗೂ ಗುಂಡ್ಲುಪೇಟೆ ಡಿಪೋ ವ್ಯವಸ್ಥಾಪಕ ಜಯಕುಮಾರ್‌ ಅವರು ಬುಧವಾರ ಬೆಳಗ್ಗೆ ಗರಗನಹಳ್ಳಿ ಹಾಗೂ ಅಗತಗೌಡನಹಳ್ಳಿಗೆ ಭೇಟಿ ನೀಡಿದ್ದರು. ವಿದ್ಯಾರ್ಥಿಗಳನ್ನು ಮಾತನಾಡಿಸಿ ಮಾಹಿತಿ ಪಡೆದುಕೊಂಡರು.

ಗುಂಡ್ಲುಪೇಟೆ ಡಿಪೋದಿಂದ ಹೊರಡುವ ಬಸ್‌ ಬೆಳಗ್ಗೆ 8.45ಕ್ಕೆ ಗರಗನಹಳ್ಳಿ ಗ್ರಾಮಕ್ಕೆ ಬಂದು ವಿದ್ಯಾರ್ಥಿಗಳನ್ನು
ಹತ್ತಿಸಿಕೊಂಡು ಅಗತಗೌಡನಹಳ್ಳಿ ಮಾರ್ಗ ಹೋಗುವ ವ್ಯವಸ್ಥೆ ಮಾಡಲಾಯಿತು. ಅಲ್ಲದೇ ಸಂಜೆ, ಗುಂಡ್ಲು ಪೇಟೆಯಿಂದ ಹೊರಟು, ಅಗತಗೌಡನಹಳ್ಳಿ, ಹೆಗ್ಗಡಹಳ್ಳಿ, ಅಕ್ಕಲಪುರಕ್ಕೆ ಹೋಗಿ ವಾಪಸ್‌ ಬಂದು 4.30ಕ್ಕೆ ಅಗತಗೌಡನಹಳ್ಳಿಯಲ್ಲಿ ಮಕ್ಕಳನ್ನು ಹತ್ತಿಸಿಕೊಂಡು ಗರಗನಹಳ್ಳಿಗೆ ಬಿಟ್ಟು ಹಿಂದಿರುಗುವ ರೂಟ್‌ ಮಾಡಲಾಯಿತು.

ಗ್ರಾಮದಲ್ಲಿ ಸಂಭ್ರಮ
ಕೆಎಸ್‌ಆರ್‌ಟಿಸಿ ಬಸ್‌ನೊಂದಿಗೆ ಗರಗನಹಳ್ಳಿ ಗೇಟ್‌ಗೆ ಬುಧವಾರ ಬೆಳಗ್ಗೆ ಬಂದ ಅಧಿಕಾರಿಗಳು, ನೂತನ
ಬಸ್‌ ಮಾರ್ಗಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಅಗತ ಗೌಡನಹಳ್ಳಿಗೆ ಬಂದರು.

Advertisement

ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸಂಭ್ರಮಿಸಿದರು. ಅನೇಕ ವರ್ಷಗಳಿಂದ ಈ ಸಮಸ್ಯೆಯಿದ್ದರೂ, ಯಾರೂ
ಬಗೆಹರಿಸಿರಲಿಲ್ಲ. ಉದಯವಾಣಿ ವರದಿಯಿಂದ ಸೌಲಭ್ಯ ದೊರಕಿದೆ ಎಂದು ಶಿಕ್ಷಕಿ ಶ್ರೀದೇವಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next