ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಶಿವಮೊಗ್ಗದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ವಿಧ್ಯಾರ್ಥಿನಿಯರನ್ನ ಆರತಿ ಬೆಳಗಿಸಿ, ಹೂ ನೀಡಿ ಬರ ಮಾಡಿಕೊಂಡರು. ಶಾಲಾ ಸಿಬ್ಬಂದಿ ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿಸಿ, ಸ್ಯಾನಿಟೈಜ್ ಸಿಂಪಡಿಸಿ, ಸಿಹಿ ವಿತರಿಸಿದರು.
ಶಾಲೆಯ ಮಕ್ಕಳೆಲ್ಲಾ ಸಾಲಾಗಿ ನಿಂತು ಒಕ್ಕೊರಲಿನಿಂದ ಆಫ್‌ಲೈನ್ ತರಗತಿಗಳಿಗೆ ಮೆಚ್ಚುಗೆ ಸೂಚಿಸಿದರು. ಸಚಿವರು ಕೆಲವು ಮಕ್ಕಳನ್ನ ಮಾತನಾಡಿಸಿ ಅಭಿಪ್ರಾಯವನ್ನೂ ಸಹ ಕೇಳಿದರು. ಮಕ್ಕಳೆಲ್ಲಾ ತಮಗೆ ಕಾಲೇಜು ಆರಂಭವಾಗಿರೋದು ಖುಷಿ ತಂದಿದೆ ಎಂದರು.
ಇದನ್ನೂ ಓದಿ:ಸಸಿ ನೆಡುವ ಮೂಲಕ ಶಾಲೆ- ಕಾಲೇಜು ಭೌತಿಕ ತರಗತಿ ಪುನಾರಂಭಕ್ಕೆ ಚಾಲನೆ ನೀಡಿದ ಸಿಎಂ
ಸಚಿವ ಈಶ್ವರಪ್ಪ ಕಾಲೇಜೊಳಗೆ ಪ್ರವೇಶಿಸಿ ಮಕ್ಕಳನ್ನು ಯಾವ ತರಹ ಕೋವಿಡ್ ನಿಯಮಗಳನ್ನ ಪಾಲಿಸಿ ಕೂರಿಸಿದ್ದಾರೆಂದು ಪರಿಶೀಲನೆ ನಡೆಸಿದರು. ಒತ್ತೊತ್ತಾಗಿ ಇದ್ದ ಡೆಸ್ಕ್‌ಗಳನ್ನ ಕಡಿಮೆಗೊಳಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿ, ಕೋವಿಡ್ ಕಡಿಮೆಯಾಗಿದೆ ಆದರೆ ನಾವೆಲ್ಲಾ ಮತ್ತೆ ತಂದುಕೊಳ್ಳುವುದು ಬೇಡ. ಮಕ್ಕಳೆಲ್ಲಾ ಖುಷಿಯಿಂದ ಶಾಲೆಗೆ ಬಂದಿದ್ಧಾರೆ. ಈ ಸಂದರ್ಭದಲ್ಲಿ ಪೋಷಕರಿಗೆ ನನ್ನ ಮನವಿ ಇಷ್ಟೇ, ಯಾರೂ ಭಯಬೀಳದೆ ಮಕ್ಕಳನ್ನು ಶಾಲೆ-ಕಾಲೇಜಿಗೆ ಕಳುಹಿಸಿ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆ ಮುಂದುವರಿಸಲು ಅನುವು ಮಾಡಿಕೊಡಬೇಕು ಎಂದರು.