Advertisement
ಪುಸ್ತಕ ಬಿಡುಗಡೆಗೊಳಿಸಿದ ಖ್ಯಾತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರು ಮಾತನಾಡಿ, ನಾವು ಸಂವಿಧಾನದ ನೆರಳಲ್ಲಿದ್ದೀವಾ ಅಥವಾ ಸಂವಿಧಾನದ ಬಲದಲ್ಲಿದ್ದೀವಾ ಎಂಬುದನ್ನು ಅರಿಯಬೇಕು. ಸಂವಿಧಾನ ಎಂಬುದು ದೊಡ್ಡ ವೃಕ್ಷ. ಅದರಡಿ ಮಲಗಿ ನಿದ್ದೆ ಮಾಡಬಾರದು. ಆ ನೆರಳಿನಲ್ಲಿ ಮಲಗಿ ಕಣ್ಣುಬಿಟ್ಟು ಕನಸು ಕಾಣಬೇಕು. ಬಿಟ್ಟಕಣ್ಣಿನ ಕನಸನ್ನು ಸಾಕಾರಗೊಳಿಸಬೇಕು. ಹೆಚ್ಚಿನ ಶ್ರಮವಹಿಸಿ ಜಗತ್ತಿನೊಂದಿಗೆ ಜೀವಂತವಾಗಿ ವ್ಯವಹರಿಸಬೇಕು ಎಂದು ಹೇಳಿದರು.
Related Articles
Advertisement
ಪ್ರಗತಿಪರ ಚಿಂತಕರು ಸಂವಿಧಾನದ ಪರ ಇದ್ದಾರೆ. ಅವರ ಅನುಭವ ಅತ್ಯಂತ ಮೌಲ್ಯವಾದದ್ದು. ಅವುಗಳು ಬರಹ ರೂಪದಲ್ಲಿ ಬರಬೇಕು. ಆ ಸಂಪತ್ತನ್ನು ಯುವ ಪೀಳಿಗೆಗೆ ತಲುಪಿಸುವುದು ಎಲ್ಲಾ ಲೇಖಕರ ಕರ್ತವ್ಯ. ನಾವು ಇನ್ನು ಮುಂದೆ ಪ್ರಗತಿಪರರನ್ನು ದೂರವಿಡುವುದು, ಅನುಮಾನಿಸುವುದು ಬೇಡ ಎಂದು ಅಭಿಪ್ರಾಯಪಟ್ಟರು.
ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ಮಾತನಾಡಿ, ನನ್ನ ಭಾವನೆ, ನಿಲುವು ಮತ್ತು ಅಭಿಪ್ರಾಯಗಳನ್ನು ಅಕ್ಷರ ರೂಪಕ್ಕಿಳಿಸಿದ ಪುಸ್ತಕ ಇದಾಗಿದೆ. ಸಾಹಿತಿಗಳು, ಪ್ರಗತಿಪರ ಚಿಂತಕರು, ರಾಜಕೀಯ ಮುಖಂಡರು, ಯುವ ಸಮುದಾಯ ಹಾಗೂ ಮಹಿಳೆಯರು, ಸಾರ್ವಜನಿಕರು ಈ ಸಮಾರಂಭಕ್ಕೆ ಆಗಮಿಸಿ ಯಶಸ್ವಿಗೊಳಿಸಿದ್ದಾರೆ. ನನಗೆ ವೈಯಕ್ತಿಕವಾಗಿ ಸಂತೋಷವಾಗಿದೆ. ಅದರಂತೆ ಈ ಪುಸ್ತಕವನ್ನು ಎಲ್ಲರೂ ಓದಿ ವಿಮರ್ಶೆ ಮಾಡಬೇಕು ಎಂದು ತಿಳಿಸಿದರು.
ಪುಸ್ತಕ ಕುರಿತು ಮಾತನಾಡಿದ ವಿಮರ್ಶಕ ಡಾ.ಕೆ.ವೈ.ನಾರಾಯಣಸ್ವಾಮಿ ಅವರು, ಸಚಿವರು ತಾವು ಕಂಡಂತ ರಾಜಕೀಯ ಹಾಗೂ ಸಾಮಾಜಿಕ ಸಂಗತಿಗಳನ್ನು ತುಂಬಾ ಪರಿಣಾಮಕಾರಿಯಾಗಿ ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಅವರು ಮಾತನಾಡಿ, ರಾಜಕಾರಣಿಗೆ ಬದ್ಧತೆ ಹಾಗೂ ಪ್ರಬುದ್ಧತೆ ಮುಖ್ಯ. ಆ ಸಾಲಿನಲ್ಲಿನ ಅಪರೂಪದ ರಾಜಕಾರಣಿ ಎಚ್.ಸಿ.ಮಹದೇವಪ್ಪ ಅವರು ಕೃತಿಯಲ್ಲಿ ವ್ಯಕ್ತಿಗತವಾಗಿ ಯಾವುದೇ ನಿಂದನಾತ್ಮಕ ಪದ ಬಳಸದೆ, ತತ್ವಕ್ಕೆ ಕೊಡಬೇಕಾದ ಸೂಕ್ತ ಬೆಲೆ ಕೊಟ್ಟಿದ್ದಾರೆ. ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.