ಮುಂಬಯಿ /ಬೆಂಗಳೂರು: ರಾಜೀನಾಮೆ ನೀಡಿರುಲ ಅತೃಪ್ತ ಶಾಸಕರಿರು ಹೊಟೇಲ್ ಪ್ರವೇಶಕ್ಕೆ ಮುಂದಾದ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮುಂಬಯಿ ಪೊಲೀಸರು ತಡೆದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಡಿ.ಕೆ.ಶಿವಕುಮಾರ್ ಅವರು ಹೊಟೇಲ್ ಪ್ರವೇಶಕ್ಕೆ ಮುಂದಾದಾಗ ಅಲ್ಲಿದ್ದ ಪೊಲೀಸರು ತಡೆದಿದ್ದಾರೆ. ಇದರಿಂದ ಕೆಂಡಾಮಂಡಲವಾದ ಸಚಿವ ಡಿ.ಕೆ ಶಿವಕುಮಾರ್, ‘ಬಿಜೆಪಿ ನಾಯಕರಿಗೆ ಒಳಪ್ರವೇಶಕ್ಕೆ ಅವಕಾಶ ನೀಡುತ್ತೀರಿ, ನನಗೆ ಯಾಕೆ ನೀಡುತ್ತಿಲ್ಲಾ, ಅವರೆಲ್ಲಾ ನನ್ನ ಮಿತ್ರರು , ನಮ್ಮ ಪಕ್ಷದವರು. ಒಳಗೆ ಪ್ರವೇಶಕ್ಕೆ ಅವಕಾಶ ನೀಡಿ, ಇಲ್ಲವಾದಲ್ಲಿ ಇಡೀ ದಿನ ಇಲ್ಲೆ ನಿಲ್ಲುತ್ತೇನೆ’ ಎಂದು ಪಟ್ಟು ಹಿಡಿದಿದ್ದಾರೆ.
‘ನಾನು ಇಲ್ಲಿ ಒಂದು ರೂಮ್ ಬುಕ್ ಮಾಡಿದ್ದೇನೆ. ನನ್ನ ಸ್ನೇಹಿತರು ಇಲ್ಲಿ ಇದ್ದಾರೆ. ಸಣ್ಣ ಸಮಸ್ಯೆ ಇದೆ, ನಾವು ಮಾತುಕತೆಗಳನ್ನು ನಡೆಸುತ್ತೇವೆ. ಬೆದರಿಕೆ ಹಾಕುವ ಪ್ರಶ್ನೆಯೇ ಇಲ್ಲ, ನಾವು ಪರಸ್ಪರ ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ’ ಎಂದಿದ್ದಾರೆ.
‘ಪೊಲೀಸರು ಅವರ ಕೆಲಸ ಮಾಡಲಿ, ನಾವು ನಮ್ಮ ಸ್ನೇಹಿತರನ್ನು ಭೇಟಿಯಾಗಲು ಬಂದಿದ್ದೇವೆ.ರಾಜಕಾರಣದಲ್ಲಿ ಒಟ್ಟಿಗೆ ಹುಟ್ಟಿದ್ದೇವೆ, ಒಟ್ಟಿಗೆ ಸಾಯುತ್ತೇವೆ’ ಎಂದರು.
ಸಚಿವ ಜಿ.ಟಿ.ದೇವೇಗೌಡ ಮತ್ತು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಮುಂಬಯಿಗೆ ತೆರಳಿದ್ದು ಅವರಿಗೂ ಹೊಟೇಲ್ ಒಳಪ್ರವೇಶಿಸಲು ಅವಕಾಶ ನಿರಾಕರಿಸಲಾಗಿದೆ.
ಹೊಟೇಲ್ ಎದುರು ಭಾರಿ ಸಂಖ್ಯೆಯ ಪೊಲೀಸರನ್ನುನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಗೋ ಬ್ಯಾಕ್ , ಗೋ ಬ್ಯಾಕ್
ಹೊಟೇಲ್ ಹೊರಗೆ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಗೋ ಬ್ಯಾಕ್ , ಗೋಬ್ಯಾಕ್ ಎಂಬ ಘೋಷಣೆಗಳನ್ನು ಜೆಡಿಎಸ್ ಶಾಸಕ ನಾರಾಯಣ ಗೌಡ ಅವರ ಬೆಂಬಲಿಗರು ಕೂಗಿದ್ದಾರೆ.
ರಾಜೀನಾಮೆ ನೀಡಿರುವ ಶಾಸಕರು ಪೊಲೀಸರಿಗೆ ದೂರು ನೀಡಿದ್ದು, ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಮ್ಮನ್ನು ಬಲತ್ಕಾರವಾಗಿ ಎಳೆದೊಯ್ಯಲಿದ್ದಾರೆ, ನಮಗೆ ಭದ್ರತೆ ನೀಡಿ ಎಂದು ದೂರು ನೀಡಿದ್ದರು ಮತ್ತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಅತೃಪ್ತ ಶಾಸಕರ ರಾಜೀನಾಮೆ ಡ್ರಾಮಾ, ಹೊಸ ತಿರುವು ಪಡೆದು ಕೊಂಡಿದ್ದು, ಹದಿಮೂರು ಶಾಸಕರ ರಾಜೀನಾಮೆಗಳಲ್ಲಿ ಐದನ್ನು ಮಾತ್ರ ಕ್ರಮಬದ್ಧ ಎಂದಿರುವ ಸ್ಪೀಕರ್ ರಮೇಶ್ ಕುಮಾರ್ ಅವರು, ಉಳಿದ ಎಂಟು ರಾಜೀನಾಮೆಗಳನ್ನು ತಿರಸ್ಕರಿಸಿದ್ದಾರೆ.