Advertisement
ಮಂಗಳವಾರವೂ ಶಿವಕುಮಾರ್ ಒಬ್ಬರಿಗೇ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದರು. ಅಲ್ಲದೇ ಶಿವಕುಮಾರ್ ಕೂಡ ಮಾಧ್ಯಮಗಳ ಎದುರು “ಮಂಗಳವಾರ ತಾವೊಬ್ಬರೇ ವಿಚಾರಣೆಗೆ ಹಾಜರಾಗುತ್ತೇನೆ, ಬೆಳಗ್ಗೆ ಮುಖ್ಯಮಂತ್ರಿಗಳ ಜತೆ ನಿರಂತರ ಸಭೆ ಇರುವುದರಿಂದ ಮಧ್ಯಾಹ್ನದ ಬಳಿಕ ಬರುತ್ತೇನೆಂದು ಕೇಳಿಕೊಂಡಿದ್ದೇನೆ. ಇದಕ್ಕೆ ತನಿಖಾಧಿಕಾರಿಗಳು ಸಮ್ಮತಿಸಿದ್ದಾರೆ’ ಎಂದಿದ್ದರು. ಆದರೆ, ಮಂಗಳವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಹಾಗೂ ವಿದ್ಯುತ್ ಖರೀದಿ ಹಗರಣ ಸದನ ಸಮಿತಿ ಸಭೆ ಇರುವುದರಿಂದ ಐಟಿ ವಿಚಾರಣೆಗೆ ಹಾಜರಾಗಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ, ಬಿಹಾರದಲ್ಲಿ ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಸಭೆ ಇರುವುದರಿಂದ ಬುಧವಾರವೂ ವಿಚಾರಣೆಗೆ ಹೋಗುವುದು ಬಹುತೇಕ ಅನುಮಾನ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಡಿಕೆಶಿ, “ನನ್ನ ಫೋನ್ ಕದ್ದಾಲಿಕೆ ಆಗುತ್ತಿದೆ. ಫಾಲೋ ಮಾಡುತ್ತಿದ್ದಾರೆ. ರಾಜಕೀಯಕ್ಕೆ ಬಂದಾಗಿನಿಂದ ನಿರಂತರವಾಗಿ ಕಣ್ಣಿಟ್ಟಿದ್ದಾರೆ. ಕೆಲವು ಸಂಸ್ಥೆಗಳಿಗೆ ಅಧಿಕಾರ ಇದೆ, ಮಾಡುತ್ತಾರೆ. ಆದಾಯ ತೆರಿಗೆ ಇಲಾಖೆ ವಿಚಾರಣೆಗೆ ಹೋಗುವುದಿಲ್ಲ, ಬೇಡ ಎಂದಿದ್ದಾರೆ. ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವಂತೆ ಇಡಿ ತನಿಖೆ, ಸಿಬಿಐ ಆಸ್ತಿ ಮುಟ್ಟುಗೋಲು ಯಾವುದೂ ಇಲ್ಲ. ನಾನು ಕನಕಪುರದ ಬಂಡೆ ಇದ್ದಂತೆ ತಲೆ ಚಚ್ಚಿಕೊಂಡ್ರೆ ತಲೆಗೆ ಪೆಟ್ಟಾಗೋದು ಹೊರತು ಬಂಡೆಗಲ್ಲ’ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.