ದಾವಣಗೆರೆ: ಕೇಂದ್ರದ ನಬಾರ್ಡ್ ನಿಂದ ರಾಜ್ಯಕ್ಕೆ ಬರಬೇಕಾದ ಶೇ. 58 ರಷ್ಟು ಹಣ ಕಡಿತವಾಗಿದ್ದು ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ. ಆದರೂ ಪ್ರತಿಪಕ್ಷ ಬಿಜೆಪಿಯವರು ಈ ಕುರಿತು ಏನೂ ಮಾತನಾಡುತ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು ರಾಜ್ಯದ ರೈತರಿಗೆ ಸಾಲ ಕೊಡಲು ಅನುಕೂಲವಾಗುತ್ತಿದ್ದ ನಬಾರ್ಡ್ ಹಣವನ್ನು ಕೇಂದ್ರ ಸರ್ಕಾರ ಅರ್ಧಕ್ಕಿಂತ ಹೆಚ್ಚು ಕಡಿಮೆ ಮಾಡಿದೆ. ಮೊದಲು 5700 ಕೋಟಿ ರೂ. ಬರುತ್ತಿದ್ದ ಹಣವನ್ನು 2700 ಕೋಟಿಗೆ ಕಡಿತ ಮಾಡಲಾಗಿದೆ. ಇಂಥ ತೀರ್ಮಾನ ಕೈಗೊಳ್ಳಲು ಬಿಜೆಪಿಯವರಿಗೆ ಮನಸ್ಸಾದರೂ ಹೇಗೆ ಬಂತು? ಎಂದು ಕಿಡಿಕಾರಿದ್ದಾರೆ.
ರಾಜ್ಯದ ಗ್ಯಾರಂಟಿ ಯೋಜನೆ ಬಗ್ಗೆ, ಪಡಿತರಚೀಟಿ ಬಗ್ಗೆ ಮಾತನಾಡುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜಾಧ್ಯಕ್ಷ ವಿಜಯೇಂದ್ರ, ಆರ್. ಅಶೋಕ್ ಅವರು ನಬಾರ್ಡ್ನಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಏಕೆ ಮಾತನಾಡುತ್ತಿಲ್ಲ ? ನಾವು ಯಾವುದೇ ಅರ್ಹ ಫಲಾನುಭವಿಯ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿಲ್ಲ, ಗ್ಯಾರಂಟಿ ಕಾರಣಕ್ಕೂ ಕಾರ್ಡ್ ರದ್ದು ಮಾಡುತ್ತಿಲ್ಲ. ಅನರ್ಹರನ್ನು ಪತ್ತೆ ಮಾಡಿ ರದ್ದು ಮಾಡಿ, ಎಲ್ಲ ಅರ್ಹರಿಗೆ ಕಾರ್ಡ್ ಒದಗಿಸುತ್ತಿದ್ದೇವೆ. ಅನರ್ಹರ ಸಾವಿರ ಕಾರ್ಡ್ ರದ್ದು ಮಾಡಿದಾಗ ಅದರ ಜತೆ ಎಲ್ಲೋ 10-20 ಅರ್ಹರ ಕಾರ್ಡ್ ಕೂಡ ಸೇರಿ ರದ್ದಾಗಿರಬಹುದು. ಅದನ್ನು ಕೂಡಲೇ ಸರಿಪಡಿಸಿ ಬಿಪಿಎಲ್ ಕಾರ್ಡ್ ಕೊಡುವಂತೆ ಮುಖ್ಯಮಂತ್ರಿಯವರೇ ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಯಾರೂ ಆದಾಯ ತೆರಿಗೆದಾರರೋ, ಸರ್ಕಾರಿ ನೌಕರರೋ, ಜಿಎಸ್ಟಿ ಪಾವತಿದಾರರಿದ್ದಾರೋ ಅಂಥವರ ಬಿಪಿಎಲ್ ಕಾರ್ಡ್ ಮಾತ್ರ ರದ್ದು ಮಾಡಲಾಗುತ್ತಿದೆ. ನಾನು ಆಹಾರ ಸಚಿವನಾಗಿದ್ದಾಗ 20 ಲಕ್ಷ ಅನರ್ಹ ಕಾರ್ಡ್ ರದ್ದು ಮಾಡಿದ್ದೆ ಹಾಗೂ 15 ಲಕ್ಷ ಹೊಸ ಬಿಪಿಎಲ್ ಕಾರ್ಡ್ ಕೊಟ್ಟಿದ್ದೆ ಎಂದು ಹೇಳಿದರು.
ಕೋವಿಡ್ ಸಂಕಷ್ಟದ ಸಮಯದಲ್ಲಿ ಬಿಜೆಪಿ ಹಣ ಲೂಟಿ ಮಾಡಿದೆ ಎಂದು ಪ್ರತಿಪಕ್ಷದಲ್ಲಿದ್ದಾಗ ನಾವು (ಕಾಂಗ್ರೆಸ್) ಆರೋಪ ಮಾಡಿದ್ದೇವು. ಆಡಳಿತಕ್ಕೆ ಬಂದ ಮೇಲೆ ಆಯೋಗ ರಚಿಸಿದ್ದು ಆಯೋಗದಿಂದ ಸಮಗ್ರ ವರದಿ ಬಂದಿದ್ದು ನಾವು ಮಾಡಿದ ಆರೋಪ ಸಾಬೀತಾಗಿದೆ. ಎರಡನೇ ಹಂತದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಹಾಗಾಗಿ ಎಸ್ಐಟಿ ರಚನೆ ಮಾಡಿದ್ದು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಆಗಲಿದೆ ಎಂದು ಹೇಳಿದರು.
ಇದು ಯಾರ ಮೇಲಿನ ದ್ವೇಷದಿಂದ ಮಾಡಿದ್ದಲ್ಲ. ಜಿದ್ದಿಗೆ ಬಿದ್ದು ತನಿಖೆ ನಡೆಸುತ್ತಿಲ್ಲ. ಯಡಿಯೂರಪ್ಪ, ಶ್ರೀರಾಮುಲು, ಸುಧಾಕರ್, ಬೊಮ್ಮಾಯಿ ಅಂತ ಅಲ್ಲ ಯಾರೇ ತಪ್ಪು ಮಾಡಿದ್ದರೂ ಕಾನೂನು ಕ್ರಮ ಆಗಬೇಕು ಎಂಬುದು ನಮ್ಮ ಉದ್ದೇಶ.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಇಲ್ಲ. ಆದರೆ, ಕೆಲವು ಖರೀದಿಸಲು ಆಗದ ಔಷಧಿಗಳಿದ್ದರೆ ಅದನ್ನು ಖರೀದಿಸಿ ಬಡವರಿಗೆ ನೀಡಲು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಬಡವರಿಗೆ ತ್ವರಿತ ಸೇವೆ ನೀಡಲು ಅನುಕೂಲವಾಗುವಂತೆ ಎಲ್ಲ ಜಿಲ್ಲಾ ಸ್ಪತ್ರೆಗಳಲ್ಲಿ ಹೊಸದಾಗಿ ಒಂದೊಂದು ಬ್ಲಾಕ್ ಮಾಡಲು 17 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಬೇಕಾಗಿರುವ ಸೌಲಭ್ಯ, ಸಲಕರಣೆ, ಸಿಬ್ಬಂದಿ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲು ಶೀಘ್ರದಲ್ಲಿಯೇ ಎಲ್ಲ ಜಿಲ್ಲಾ ಆರೋಗ್ಯ ಶಸ್ತ್ರಚಿಕಿತ್ಸಕರು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ