Advertisement

ಪಶು ಆಸ್ಪತ್ರೆಗಳಿಗೆ ಸಚಿವ ಚವ್ಹಾಣ್ ದಿಢೀರ್ ಭೇಟಿ

09:24 AM Sep 11, 2019 | Team Udayavani |

ಬೀದರ್: ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸೋಮವಾರ ನಗರದ ಪಶು ಆಸ್ಪತ್ರೆಗಳಿಗೆ ಹಾಗೂ ಪಶು ಇಲಾಖೆಗೆ ದಿಢೀರ್ ಭೇಟಿ ನೀಡಿದ್ದು ಕುಡಿದ ಮತ್ತಿನಲ್ಲಿದ್ದ ‘ಡಿ’ ಗ್ರೂಪ್ ನೌಕರನಿಗೆ ಸಸ್ಪೆಂಡ್ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ನಗರದ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಭೇಟಿ ನೀಡಿದ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಡಿ ಗ್ರೂಪ್ ನೌಕರ ಬಾಬು ಎಂಬಾತನನ್ನು ಸಸ್ಪೆಂಡ್ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಆದೇಶ ನೀಡಿದರು.

ಕಚೇರಿಯ ಮತ್ತೊರ್ವ ಎಫ್‌ಡಿಎ ಗಾಂಧಿ ಎಂಬಾತ ಗುಟ್ಕಾ ಜಗಿಯುತ್ತಿರುವುದನ್ನು ಕಂಡ ಸಿಡಿಮಿಡಿಗೊಂಡ ಸಚಿವರು ನೌಕರನ ಚಳಿ ಬಿಡಿಸಿದರು. ಹಾಗೇ, ಉಪನಿರ್ದೇಶಕ ಗೌತಮ್ ಅರಳಿ ಸಚಿವರಿಗೆ ಹಿಂದಿಯಲ್ಲಿ ಮಾಹಿತಿ ನೀಡುವುದನ್ನು ತಡೆದ ಸಚಿವ ಚವ್ಹಾಣ್ ಕನ್ನಡದಲ್ಲೇ ಮಾತಾಡಿ ಎಂದು ತಾಕೀತು ಮಾಡಿದರು.

ನಗರದ ಗಾಂಧಿ ಗಂಜ್ ಬಳಿಯ ಪಶು ಆಸ್ಪತ್ರೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಆಸ್ಪತ್ರೆಯಲ್ಲಿ ಅವಧಿ ಮುಗಿದ ಔಷಧಗಳು ಸಂಗ್ರಹಿಸಿರುವ ಬಗ್ಗೆ ಕಿಡಿಕಾರಿದ ಸಚಿವರು ಆಸ್ಪತ್ರೆ ನಿರ್ವಹಣೆ ಮಾಡುತ್ತಿರುವ ಪಶು ವೈದ್ಯಕೀಯ ವಿಶ್ವ ವಿದ್ಯಾಲಯದ ಕುಲಪತಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ತಿಂಗಳಲ್ಲಿ 15 ದಿನಗಳ ಕಾಲ ಬೆಂಗಳೂರಲ್ಲೆ ಇರುತ್ತಿದ್ದಾರೆ. ಮುಖ್ಯಮಂತ್ರಿಗಳ ಜೊತೆ  ಮಾತನಾಡಿ ಸರಿಪಡಿಸಲಾಗುವುದು ಎಂದು ಮಾಧ್ಯಮದವರಿಗೆ ಹೇಳಿದರು.

ಇನ್ನು ಮುಂದೆ ರಾಜ್ಯದ ವಿವಿಧೆಡೆಗಳಲ್ಲಿರುವ ಪಶು ಸಂಗೋಪನಾ ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ವ್ಯವಸ್ಥೆ ಸರಿಪಡಿಸುವುದಾಗಿ ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next