ಮಂಡ್ಯ: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿರುವ ನಟ ದರ್ಶನ್ ಬಿಡುಗಡೆಗೆ ಯಾವ ಸಚಿವರು ಒತ್ತಡ ಹಾಕಿಲ್ಲ. ನಮ್ಮ ಮುಖ್ಯಮಂತ್ರಿ ಒತ್ತಡಕ್ಕೆ ಮಣಿಯುವವರು ಅಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಕೆಆರ್‌ಎಸ್ ಜಲಾಶಯದ ಖಾಸಗಿ ಹೋಟೆಲ್‌ನಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ಆಗಲಿದೆ ಎಂದರು.
ನಟ ದರ್ಶನ್ ಜೊತೆಗೆ ಆತ್ಮೀಯತೆ ಇರಬಹುದು. ಆದರೆ ಆತ್ಮೀಯತೆ ಬೇರೆ, ವಿಶ್ವಾಸವೇ ಬೇರೆ. ಆದರೆ ಪ್ರಕರಣದಲ್ಲಿ ತನಿಖೆ ನಡೆಯುತ್ತಿದ್ದು, ನ್ಯಾಯಾಲಯದಲ್ಲಿ ತೀರ್ಮಾನ ಆಗಲಿದೆ. ಕಲಾವಿದ ಎಂಬ ಹಿನ್ನೆಲೆಯಲ್ಲಿ ಎಲ್ಲರಿಗೂ ಪರಿಚಯ ಇರುತ್ತಾರೆ. ಹಾಗಂತ ತನಿಖೆ ಹಳ್ಳ ಹಿಡಿಯತ್ತೆ ಅಂತ ಅಲ್ಲ. ನಮ್ಮ ಸರ್ಕಾರ ನೂರಕ್ಕೆ ನೂರು ನಿಷ್ಪಕ್ಷಪಾತ ತನಿಖೆಗೆ ಬದ್ಧವಾಗಿದೆ ಎಂದು ತಿಳಿಸಿದರು.
ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅತ್ಯಂತ ಬಹುಮತದಿಂದ ಗೆದ್ದಿದ್ದಾರೆ. ಕೇಂದ್ರದಲ್ಲಿ ಉತ್ತಮವಾದ ಖಾತೆಯನ್ನು ಪಡೆದುಕೊಂಡಿದ್ದಾರೆ. ಜಿಲ್ಲೆಯ ಯುವಕರಿಗೆ ಉದ್ಯೋಗ ಕೊಡಿಸುವುದಾದರೆ ಸಂತೋಷ. ಅದನ್ನು ಸ್ವಾಗತ ಮಾಡುತ್ತೇನೆ. ಅಭಿವೃದ್ಧಿ ಬಗ್ಗೆ ಸಹಕಾರ ಬೇಕಿದ್ದರೆ ನೀಡುವುದಕ್ಕೆ ನಾವು ಸಿದ್ಧರಿದ್ದೇವೆ. ಚುನಾವಣೆ ಮುಗಿದಿದೆ. ಟೀಕೆ, ಟಿಪ್ಪಣಿ ಬೇಡ. ನಮಗೆ ಅಭಿವೃದ್ಧಿ ಮುಖ್ಯ ಎಂದರು.
ಚನ್ನಪಟ್ಟಣದಲ್ಲಿ ಡಿ.ಕೆ.ಶಿವಕುಮಾರ್ ಸ್ಪರ್ಧೆ ಮಾಡುವ ಅವಶ್ಯಕತೆ ಇಲ್ಲ. ಈಗಾಗಲೇ ಡಿ.ಕೆ.ಶಿವಕುಮಾರ್ ಶಾಸಕರಾಗಿ ಉಪಮುಖ್ಯಮಂತ್ರಿ ಆಗಿದ್ದಾರೆ. ಸ್ಪರ್ಧೆ ಮಾಡುತ್ತಾರೆ ಎನ್ನುವುದೆಲ್ಲ ಊಹಾಪೋಹ. ಡಿ.ಕೆ.ಸುರೇಶ್ ಲೋಕಸಭಾ ಚುನಾವಣೆಯಲ್ಲಿ ಸೋತಿರುವುದರಿಂದ ಅಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತಿದೆ. ಡಿ.ಕೆ.ಸುರೇಶ್ ಸ್ಪರ್ಧೆ ಬಗ್ಗೆ ಪಕ್ಷ ಮತ್ತು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಿರ್ಧಾರ ಮಾಡುತ್ತಾರೆ ಎಂದರು.