ಸುವರ್ಣವಿಧಾನಸೌಧ: ನಿರೀಕ್ಷಣಾ ಮಂದಿರಗಳ ನಿರ್ವಹಣೆ, ವೆಚ್ಚದ ಬಗ್ಗೆ ಸದನದಲ್ಲಿ ಚರ್ಚೆ ಬೇಡ, ಕಾಲ ಕಾಲಕ್ಕೆ ಒದಗಿಸಲಾಗುವ ಅನುದಾನಕ್ಕನುಗುಣವಾಗಿ ನಿರೀಕ್ಷಣಾ ಮಂದಿರಗಳನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಪರಿಷತ್‌ನಲ್ಲಿ ಬುಧವಾರ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಒಟ್ಟು 614 ನಿರೀಕ್ಷಣಾ ಮಂದಿರಗಳು ಇವೆ. ರಾಜ್ಯದ ದಕ್ಷಿಣ ವಲಯದಲ್ಲಿ 163, ಉತ್ತರ ವಲಯದಲ್ಲಿ 205, ಕೇಂದ್ರ ವಲಯದಲ್ಲಿ 76 ಹಾಗೂ ಈಶಾನ್ಯ ವಲಯದಲ್ಲಿ 170 ನಿರೀಕ್ಷಣಾ ಮಂದಿರಗಳಿವೆ.
ಲೋಕೋಪಯೋಗಿ ಇಲಾಖೆಗಳಿಂದ ನಿರ್ವಹಣೆ ಮಾಡಲಾಗುತ್ತಿದೆ. ನಿರ್ವಹಣೆಗೆ ಕೆಲವೊಂದು ನಿರೀಕ್ಷಣಾ ಮಂದಿರಗಳಿಗೆ ಹೆಚ್ಚಿನ ಹಣ ನೀಡಬೇಕಾಗುತ್ತದೆ. ಹುಬ್ಬಳ್ಳಿಯಂತಹ ಜಂಕ್ಷನ್ ಸ್ಥಳದಲ್ಲಿ ನಿರೀಕ್ಷಣಾ ಮಂದಿರಕ್ಕೆ ಸಹಜವಾಗಿ ಹೆಚ್ಚಿನ ಹಣ ನೀಡಬೇಕಾಗುತ್ತದೆ. ನಿರ್ವಹಣೆ ಅನುದಾನ ಕುರಿತಾಗಿ ಸದನದಲ್ಲಿ ಚರ್ಚಿಸುವುದು ಬೇಡ. ಅಲ್ಲಿಗೆ ಹೋಗುವವರು ಶಾಸಕರು, ಸಂಸದರು, ಸಚಿವರು, ಅಧಿಕಾರಿಗಳಾಗಿದ್ದಾರೆ ಎಂದರು.
ಮಾರ್ಚ್ ಒಳಗೆ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ
ಸುವರ್ಣ ವಿಧಾನಸೌಧ: ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಕಾಮಗಾರಿಗಳನ್ನು ಕೈಗೊಂಡ ಗುತ್ತಿಗೆದಾರರಿಗೆ 6,333.28 ಕೋಟಿ ರೂ.ಗಳ ಬಿಲ್ ಬಾಕಿ ಇದ್ದು, ಮಾರ್ಚ್ ಅಂತ್ಯದೊಳಗಾಗಿ ಪಾವತಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಶರಣಗೌಡ ಬಯ್ನಾಪುರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2022-23ನೇ ಸಾಲಿಗೆ ಲೋಕೋಪಯೋಗಿ ಇಲಾಖೆಗೆ ಒದಗಿಸಿದ 9,397.67 ಕೋಟಿ ರೂ.ಗಳ ಅನುದಾನದಲ್ಲಿ ಇದುವರೆಗೆ 7,084.31 ಕೋಟಿ ರೂ.ಗಳನ್ನು ಬಿಡುಡೆ ಮಾಡಲಾಗಿದೆ. ಮಾರ್ಚ್ ಅಂತ್ಯದೊಳಗೆ ಬಾಕಿ ಇರುವ ಬಿಲ್‌ಗಳನ್ನು ಪಾವತಿಸಲಾಗುವುದು ಎಂದು ತಿಳಿಸಿದರು.
ಇಲಾಖೆಗೆ ನಿಗದಿ ಪಡಿಸಿದ ಅನುದಾನಕ್ಕೆ, ಕೈಗೊಂಡ ಕಾಮಗಾರಿಗೆ ತಾಳೆ ಆಗುತ್ತಿಲ್ಲವಾಗಿದ್ದು, ಹೆಚ್ಚುವರಿ ಅನುದಾನಕ್ಕಾಗಿ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ.ಹಿರಿತನ ಆಧಾರದಲ್ಲಿ ಬಾಕಿ ಪಾವತಿಸಲಾಗುವುದು ಎಂದರು.