Advertisement

“ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಶೀಘ್ರ ಆದೇಶ’ : ಬೈರತಿ ಬಸವರಾಜ್‌

11:47 PM May 05, 2022 | Team Udayavani |

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಬಡಾ ವಣೆ ಅನುಮೋದನೆ ಹಾಗೂ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿರುವ ಕಟ್ಟಡಗಳ ಸಕ್ರಮಕ್ಕೆ ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಖಾಸಗಿ ಬಡಾವಣೆಗಳು ನಿರ್ಮಾಣಗೊಂಡಿದ್ದು ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಸಹಿತ ಅಗತ್ಯ ಮಂಜೂರಾತಿ ಪಡೆದಿಲ್ಲ. ಆದರೆ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಸರಕಾರದಿಂದ ಒದಗಿಸಲಾಗುತ್ತಿದೆ. ಹೀಗಾಗಿ ಅವುಗಳನ್ನು ಸಕ್ರಮ ಮಾಡಿ ತೆರಿಗೆ ವ್ಯಾಪ್ತಿಗೆ ತರುವುದು ಇದರ ಉದ್ದೇಶ ಎಂದು ಹೇಳಿದರು. ಜತೆಗೆ ಆಸ್ತಿದಾರರಿಗೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ. ಇದರ ಜತೆಗೆ ನಕ್ಷೆ ಮಂಜೂರಾತಿ ಉಲ್ಲಂಘನೆ ಸಮಸ್ಯೆಯೂ ಇದ್ದು ಅದಕ್ಕೂ ಪರಿಹಾರ ಕಲ್ಪಿಸಲು ಸರಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

150 ಕೋಟಿ ರೂ. ಯೋಜನೆ :

ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಹತ್ತು ಮಹಾನಗರ ಪಾಲಿಕೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆಯಡಿ 150 ಕೋ.ರೂ. ಮೊತ್ತದ ಕ್ರಿಯಾ ಯೋಜನೆ ರೂಪಿಸಲಾಗಿದೆ. ಇದರ ಜತೆಗೆ ಹೊಸದಾಗಿ ನಿರ್ಮಾಣಗೊಂಡಿರುವ ಬಡಾವಣೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಇನ್ನೂ ತಲಾ 100 ಕೋ.ರೂ. ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆಗಳ ವ್ಯಾಪ್ತಿ ಯಲ್ಲಿ ಎಲ್‌ಇಡಿ ದೀಪ ಅಳವಡಿಕೆಗೆ ಪಿಪಿಪಿ ಮಾದರಿಯಲ್ಲಿ ಯೋಜನೆ ಕೈಗೆತ್ತಿಕೊಂಡಿದ್ದು ಬಹುತೇಕ ಕಡೆ ಅನುಷ್ಠಾನ ಜಾರಿಯಲ್ಲಿದೆ ಎಂದು ಹೇಳಿದರು.

Advertisement

ನಗರಾಭಿವೃದ್ಧಿ ಪ್ರಾಧಿಕಾರಿಗಳು ರೈತರ ಜತೆ ಮಾತುಕತೆ ನಡೆಸಿ 50:50 ಆಧಾರದಲ್ಲಿ ಜಮೀನು ವಶಕ್ಕೆ ಪಡೆದು ಬಡಾವಣೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದ ಇಲಾಖೆಗೆ ಯಾವುದೇ ಹೊರೆ ಇಲ್ಲದೆ ಬಡಾವಣೆ ಗಳು ನಿರ್ಮಾಣವಾಗಲಿವೆ ಎಂದು ಸಚಿವ ಬೈರತಿ ಹೇಳಿದರು.

ಕುಡಿಯುವ ನೀರು ಸಮಸ್ಯೆ: ಶಾಶ್ವತ ಪರಿಹಾರ :

ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು 2,800 ಕೋ. ರೂ. ಮೊತ್ತದ ಯೋಜನೆ ರೂಪಿಸಲಾಗಿದೆ. ಐದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಅದೇ ರೀತಿ 24 ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಗೆ 1,500ಕೋ. ರೂ. ಮೊತ್ತದ ಯೋಜನೆ ರೂಪಿಸಲಾಗಿದೆ ಎಂದು ಸಚಿವ ಬೈರತಿ ಬಸವರಾಜ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next