ಚಿತ್ರದುರ್ಗ: ನಮ್ಮ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ನಾನು ಎರಡು ಮೂರು ಬಾರಿ ಪ್ರವಾಸ ಮಾಡಿದ್ದೇನೆ. ನಾವು ನಮ್ಮ ಪಕ್ಷದ ಸಂಘಟನೆ, ಸಿಎಂ, ಅಧ್ಯಕ್ಷರು ಹೇಳಿದ ಜವಾಬ್ದಾರಿ ನಿಭಾಯಿಸುತ್ತೇವೆ. ನಮ್ಮ ಪ್ರಧಾನಮಂತ್ರಿ, ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ. ಮುಂದಿನ ಚುನಾವಣೆಯನ್ನು ನಾವೆಲ್ಲಾ ಒಗ್ಗಟ್ಟಾಗಿ ಎದುರಿಸುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಕುರ್ಚಿ ಕಿತ್ತಾಟದ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಅವರ ಪಕ್ಷದ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಅದು ಅವರ ಆಂತರಿಕ ವಿಚಾರ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಯಾರು ಬೇಕಾದರೂ ಮುಖ್ಯಮಂತ್ರಿಯಾಗಲಿ. ಅದು ಅವರ ಪಕ್ಷದ ವಿಚಾರ ಎಂದರು.
ಇದನ್ನೂ ಓದಿ:ಸಿದ್ದು-ಡಿಕೆಶಿ ಜಟಾಪಟಿ ಹೈಕಮಾಂಡ್ ಮಧ್ಯಪ್ರವೇಶ?
ರಮೇಶ್ ಜಾರಕಿಹೊಳಿ ಮಹಾರಾಷ್ಟ್ರ ನಾಯಕರ ಭೇಟಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಜಾರಕಿಹೊಳಿ ಅವರು ನನ್ನ ಆತ್ಮೀಯರು. ಅವರ ದೇವೇಂದ್ರ ಫಡ್ನವೀಸ್ ಭೇಟಿಯ ಬಗ್ಗೆ ಮಾಹಿತಿಯಿಲ್ಲ. ಅವರು ನನಗೆ ಸಂಪರ್ಕಕ್ಕೆ ಸಿಕ್ಕಿಲ್ಲ, ಸಿಕ್ಕಿದರೆ ಮಾತಾಡುತ್ತೇನೆ ಎಂದರು.
ಶಾಸಕ ಅರವಿಂದ್ ಬೆಲ್ಲದ್ ಪೋನ್ ಟ್ಯಾಪಿಂಗ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಭೈರತಿ ಬಸವರಾಜ್, ಆ ವಿಚಾರವನ್ನು ಗೃಹ ಸಚಿವರು ಗಮನಿಸುತ್ತಾರೆ ಎಂದರು.