Advertisement

ಕುಡಿಯುವ ನೀರಿಗೆ 9 ಸಾವಿರ ಕೋ.ರೂ.: ಸಚಿವ ಬೈರತಿ ಬಸವರಾಜು

12:41 AM Mar 01, 2023 | Team Udayavani |

ಬಂಟ್ವಾಳ: ಇಡೀ ರಾಜ್ಯದ ನಗರ ಸ್ಥಳೀಯಾಡಳಿತ ಸಂಸ್ಥೆ(ಯುಲ್‌ಬಿ)ಗಳಲ್ಲಿ ಕುಡಿ ಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸುಮಾರು 9 ಸಾವಿರ ಕೋ.ರೂ.ಗಳ ಯೋಜನೆ ರೂಪಿಸಲಾಗಿದ್ದು, ಈಗಾಗಲೇ 100 ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಟೆಂಡರ್‌ ಕರೆದು ಶೀಘ್ರದಲ್ಲಿ ಕಾಮಗಾರಿ ಆರಂಭಕ್ಕೆ ಆದೇಶ ಪತ್ರ ನೀಡುವ ಕಾರ್ಯ ಮಾಡಲಿದ್ದೇವೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಹೇಳಿದರು.

Advertisement

ಅವರು ಮಂಗಳವಾರ ಬಂಟ್ವಾಳದ ಸಜೀಪ ಮುನ್ನೂರು ಆಲಾಡಿಯಲ್ಲಿರುವ ಕುಡಿಯುವ ನೀರಿನ ಯೋಜನೆಯ ಜಾಕ್‌ವೆಲ್‌ಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ಪತ್ರಕರ್ತರ ಜತೆ ಮಾತನಾಡಿದರು.

ನೀರಿನ ವಿಚಾರದಲ್ಲಿ ದಾಹಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿ ಕೊಂಡಿದ್ದು, ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಹಾಗೂ ರಾಜ್ಯದ ತಲಾ 4500 ಕೋ. ರೂ.ಗಳ ಅನುದಾನ ಸಿದ್ಧಪಡಿಸಲಾಗಿದೆ ಎಂದರು.

ಬಂಟ್ವಾಳಕ್ಕೆ 40 ಕೋ.ರೂ. ವೆಚ್ಚದ ಯೋಜನೆ
ಅಮೃತ್‌-2 ಮೂಲಕ ಬಂಟ್ವಾಳ ನಗರದ 40 ಕೋ.ರೂ.ಗಳ ಕುಡಿಯುವ ನೀರಿನ ಯೋಜನೆ ಟೆಂಡರ್‌ ಹಂತದಲ್ಲಿದ್ದು, ಒಳಚರಂಡಿ ವ್ಯವಸ್ಥೆಗೆ ಸುಮಾರು 56 ಕೋ.ರೂ. ವೆಚ್ಚದ ಯೋಜನೆ ಸಿದ್ಧವಾಗಿದೆ. ಬಂಟ್ವಾಳ ಕ್ಷೇತ್ರದ ಹಲವು ಗ್ರಾ.ಪಂ.ಗಳಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ 279 ಕೋ.ರೂ.ಅನುದಾನ ನೀಡಲಾಗಿದ್ದು, ಬಹಳಷ್ಟು ಸಮಯಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಯೊಂದಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿ ಗುತ್ತು, ಪ್ರಮುಖರಾದ ಸಂತೋಷ್‌ಕುಮಾರ್‌ ಶೆಟ್ಟಿ ದಳಂದಿಲ, ಶ್ರೀಕಾಂತ್‌ ಶೆಟ್ಟಿ ಸಂಕೇಶ, ಪ್ರವೀಣ್‌ ಗಟ್ಟಿ, ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಅನುದಾನ ಸಮರ್ಪಕ ಬಳಕೆ: ಬೈರತಿ
ಮಂಗಳೂರು: ರಾಜ್ಯ ಸರಕಾರದಿಂದ ಮಂಗಳೂರು ಮಹಾ ನಗರ ಪಾಲಿಕೆಗೆ ನೀಡಿ ರುವ ಅನುದಾನವನ್ನು ಸಮರ್ಪಕವಾಗಿ ಬಳಸಿ ಕೊಂಡು ನಿಗದಿತ ಕಾಲಮಿತಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸ ಬೇಕು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಜತೆಗೆ ಮಂಗಳೂರು ಹೊರವಲಯದಲ್ಲಿ ಮಂಗಳವಾರ ಅವರು ವಿಶೇಷ ಸಭೆ ನಡೆಸಿದರು.
15ನೇ ಹಣಕಾಸು ಆಯೋಗ, ನಗರೋತ್ಥಾನ, ಮಹಾತ್ಮಾ ಗಾಂಧಿ ನಗರ ನೈರ್ಮಲ್ಯ ಯೋಜನೆ, ಎಸ್‌ಎಫ್‌ಸಿ ವಿಶೇಷ ಅನುದಾನ ಸೇರಿದಂತೆ ಹಲವು ಯೋಜನೆಗಳಡಿ ಸರಕಾರ ಬಿಡುಗಡೆ ಮಾಡುವ ಅನುದಾನವು ನಿಗದಿತ ಕಾಲಮಿತಿಯಲ್ಲಿ ಬಳಕೆಯಾಗಿ ಅರ್ಹ ಫಲಾನುಭವಿಗಳಿಗೆ ಅದರ ಸೌಲಭ್ಯ ದೊರಕ ಬೇಕು. ಯಾವುದೇ ಕಾರಣಕ್ಕೂ ಆ ಅನುದಾನ ಲ್ಯಾಪ್ಸ್‌ ಆಗದಂತೆ ಎಚ್ಚರ ವಹಿಸಬೇಕು. ಕಾಮಗಾರಿಗಳು ಬಾಕಿ ಉಳಿಯಬಾರದು ಎಂದರು.

ಸಚಿವರ ಸೂಚನೆ
ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಯಾವುದೇ ಸಮಸ್ಯೆ ಎದುರಾಗಬಾರದು. ನಗರ ಸೌಂದರ್ಯದ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕು. ಬೇಸಗೆ ಆರಂಭವಾಗಿರುವುದರಿಂದ ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸುರತ್ಕಲ್‌ನಲ್ಲಿ 82 .ರೂ.ಗಳಲ್ಲಿ ನಿರ್ಮಾಣಗೊಂಡಿರುವ ಹಾಗೂ ಮಂಗಳೂರಿನ ಕದ್ರಿ ಹಾಗೂ ಕಂಕನಾಡಿಯಲ್ಲಿ ನಿರ್ಮಾಣಗೊಂಡಿರುವ ಮಾರುಕಟ್ಟೆಗಳನ್ನು 10 ದಿನದೊಳಗೆ ಲೋಕಾರ್ಪಣೆಗೊಳಿಸಬೇಕು ಎಂದರು.

ರಾತ್ರಿಯಲ್ಲಿ ಬೀದಿ ದೀಪಗಳ ಕಾರ್ಯನಿರ್ವಹಣೆಯಲ್ಲಿ ಯಾವುದೇ ಲೋಪ ಆಗ ಬಾರದು. ಬೀದಿಬದಿ ವ್ಯಾಪಾರಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಸ್ಮಾರ್ಟ್‌ಸಿಟಿ, ಮಂಗಳೂರು ಪಾಲಿಕೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸರಕಾರದ ಹಂತದಲ್ಲಿ ಆಗಬೇಕಾಗಿರುವ ಯಾವುದೇ ಕೆಲಸಗಳು ಬಾಕಿ ಉಳಿದಿದ್ದಲ್ಲಿ ಅಧಿಕಾರಿಗಳೇ ಖುದ್ದಾಗಿ ಹಾಜರಾಗಿ ಅದನ್ನು ಕೂಡಲೇ ಪೂರ್ಣಗೊಳಿಸಿ ಕೊಳ್ಳಬೇಕು ಎಂದರು.

ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಚನ್ನಬಸಪ್ಪ, ಸ್ಮಾರ್ಟ್‌ಸಿಟಿ ಅಧಿಕಾರಿ ಅರುಣ್‌ ಪ್ರಭ, ಮುಡಾ ಆಯುಕ್ತ ಭಾಸ್ಕರ್‌ ಸಹಿತ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next