ಚಿತ್ರದುರ್ಗ: ಕೋವಿಡ್-19 ಸೋಂಕು ನಿರ್ವಹಣೆಗಾಗಿ ಅಗತ್ಯ ಪರಿಕರ ಖರೀದಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡಲಿ. ಸುಮ್ಮನೆ ಹಳೇ ಕಥೆ ಹೇಳಿಕೊಂಡು ಓಡಾಡುವುದು ಬೇಡ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಾಯಕನಹಟ್ಟಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಳೇ ಕಥೆ, ಎಕ್ಸಪೈರಿ ಡೇಟ್ ನೆನಪು ಮಾಡಿಕೊಳ್ಳುವುದು ಬಿಡಿ. ನಿಮ್ಮ ಬಳಿ ಇರುವ ದಾಖಲೆ ಬಿಡುಗಡೆ ಮಾಡಿ. ಜೈಲಿಗೆ ಯಾರು ಹೋಗಬೇಕೊ ಅವರು ಹೋಗ್ತಾರೆ ಎಂದು ಸವಾಲೆಸೆದರು.
ನೀನು ಬಹಳ ದೊಡ್ಡ ಮನುಷ್ಯ, ದಾನ ವೀರ ಶೂರ ಕರ್ಣ ಎಂದು ಸಿದ್ದರಾಮಯ್ಯ ಅವರನ್ನು ಸಂಬೋಧಿಸಿದ ರಾಮುಲು, ಬಳ್ಳಾರಿಯ ಜನಾರ್ಧನ ರೆಡ್ಡಿ ಅವರನ್ನು ಜೈಲಿಗೆ ಕಳಿಸಿದಿರಿ, ಇವತ್ತು ನಿನಗೆ ಶಕ್ತಿಯಿದ್ದರೆ ಎಲ್ಲರನ್ನೂ ಜೈಲಿಗೆ ಕಳಿಸು ಯಾರು ಬೇಡ ಅನ್ನುತ್ತಾರೆ. ಯಾವುದನ್ನು ಮುಚ್ಚಿಟ್ಟಿಕೊಳ್ಳಲು ಆಗಲ್ಲ ಎಂದರು.
ಸಿದ್ಧರಾಮಯ್ಯ ದಾಖಲೆ ಬಿಡುಗಡೆಗೊಳಿಸಲು ಸ್ವತಂತ್ರರು. 2000 ಕೋಟಿ ರೂ ಭ್ರಷ್ಟಾಚಾರ ಆಗಿದೆ ಎನ್ನುತ್ತಿದ್ದಾರೆ. ಆದರೆ, ಕೋವಿಡ್ ಚಿಕಿತ್ಸೆಗಾಗಿ 600 ಕೋಟಿ ರೂಪಾಯಿಯ ವಸ್ತುಗಳು ಮಾತ್ರ ಖರೀದಿಯಾಗಿದೆ. ಇಷ್ಟಾಗಿಯೂ ದಾಖಲೆ ಇದ್ದರೆ ಮುಚ್ಚಿಟ್ಟುಕೊಳ್ಳುವುದು ಬೇಡ ಎಂದು ಹೇಳಿದರು.
ಉಪ್ಪು ತಿಂದ ಬಳಿಕ ನೀರು ಕುಡಿಯಲೇ ಬೇಕು. ಯಾರೂ ಸರ್ಕಾರದ ಹಣ ಭ್ರಷ್ಟಾಚಾರ ಮಾಡಿ ಬದುಕಲಾಗದು ಎಂದರು.