ಕೊಪ್ಪಳ: ಅಧಿಕಾರಿಗಳು ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು. ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವಾಗ ಮಾನವೀತೆಯಿಂದ ವರ್ತಿಸಿ, ಜನರು ಕಚೇರಿಗಳಿಗೆ ಅಲೆದಾಡಿಸದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ನಗರದ ಕಿಮ್ಸ್‌ನಲ್ಲಿ ಶನಿವಾರ 2020-21ನೇ ಸಾಲಿನ ನಾಲ್ಕನೇ ತ್ತೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಂಗಾ ಕಲ್ಯಾಣ ಯೋಜನೆಯಡಿ 2015-16ನೇ ಸಾಲಿನಲ್ಲಿ ಮಂಜೂರಾದ ಬೋರ್‌ವೆಲ್‌ಗಳಿಗೆ ಇಲ್ಲಿವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಆಗ ಕೊರೆಸಿದ ಬೋರ್‌ವೆಲ್‌ಗಳಲ್ಲಿ ಸದ್ಯ ನೀರು ಇರುವುದೂ ಅನುಮಾನ. ಜನಸಾಮಾನ್ಯರ ಅನುಕೂಲಕ್ಕೆ ಸರ್ಕಾರ ವಿವಿಧ ಯೋಜನೆ ಹಮ್ಮಿಕೊಂಡು ಅನುಷ್ಠಾನಕ್ಕೆ ಇಲಾಖೆಗಳಿಗೆ ನೀಡಿದರೆ, ಇಲಾಖಾ ಅಧಿಕಾರಿಗಳು ಬೇಜವಾಬ್ದಾರಿಯಿಂದ ಯೋಜನೆ ಅನುಷ್ಠಾನಗೊಳಿಸಿಲ್ಲ. ಇದರಿಂದ ಫಲಾನುಭವಿ ತೊಂದರೆ ಅನುಭವಿಸುತ್ತಾನೆ. ಆದ್ದರಿಂದ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಾಗ ತಮ್ಮ ಕಾನೂನು ಚೌಕಟ್ಟಿನೊಳಗೆ ಇದ್ದುಕೊಂಡೇ ಮಾನವೀಯತೆ ದೃಷ್ಟಿಯಿಂದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಒದಗಿಸಿ ಎಂದರು.
ಬೇಸಿಗೆ ಆರಂಭವಾಗಿದ್ದು, ಜಿಲ್ಲೆಯ ವಿವಿಧ ಗ್ರಾಮಗಳಲ್ಲಿದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯ ನಿರ್ವಹಣೆ ಪರಿಶೀಲಿಸಿ. ದುರಸ್ತಿ ಅಗತ್ಯವಿದ್ದರೆ ಅದನ್ನು ದುರಸ್ತಿಗೊಳಿಸಿ ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಿ. ಕುಡಿಯುವ ನೀರಿಗೆ ಸಂಬಂಧಿ ಸಿದಂತೆ ಪ್ರತಿ 15 ದಿನಕ್ಕೊಮ್ಮೆ ಸಂಬಂ ಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಜಿಪಂ ಸಿಇಒ ಸಭೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕು. ನೀರಿನ ಸಮಸ್ಯೆ ಬಗೆಹರಿಸಲು ಕೆಡಿಪಿ ಸಭೆಯವರೆಗೂ ಕಾಯಬೇಕಿಲ್ಲ ಎಂದರು.
ಗಂಗಾವತಿ ತಾಲೂಕಿನ ಎರಡು ಗ್ರಾಮಗಳ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೂ ಮೊದಲೇ ಬಿಲ್ ಪಾವತಿ ಮಾಡಿದ ಆರೋಪವಿದ್ದು, ಈ ಕುರಿತು ಪರಿಶೀಲಿಸಿ ವರದಿ ನೀಡಿ. ಯಲಬುರ್ಗಾ ತಾಲೂಕಿನ 24 ಹಾಗೂ ಕುಕನೂರು ತಾಲೂಕಿನ 15 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕುರಿತು ಶಾಸಕ ಹಾಲಪ್ಪ ಆಚಾರ್ ಅವರು ದೂರು ನೀಡಿದ್ದಾರೆ. ಆದ್ದರಿಂದ ಈ ಬಗ್ಗೆಯೂ ಪರಿಶೀಲಿಸಿ 15 ದಿನಗಳೊಳಗೆ ಅಗತ್ಯ ಕ್ರಮ ಕೈಗೊಂಡು ಘಟಕ ಆರಂಭಿಸಿ ಎಂದರು. ಗಂಗಾವತಿಯ ಅಕ್ಕಿ ಗಿರಣಿಗಳಿಂದ ಅಕ್ರಮವಾಗಿ ಸಾಗಿಸುತ್ತಿದ್ದ 1741 ಕ್ವಿಂಟಲ್ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಆದರೆ ಆ ಅಕ್ಕಿ ಎಲ್ಲಿಂದ ಬಂತು, ಯಾರಿಗೆ ಸಂಬಂಧಿ ಸಿದ್ದು, ವಶಪಡಿಸಿಕೊಂಡ ಅಕ್ಕಿಯನ್ನು ನಂತರದಲ್ಲಿ ಏನು ಮಾಡಲಾಯಿತು ಹಾಗೂ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕೈಗೊಂಡ ಕ್ರಮಗಳೇನು ಎಂಬುದರ ಬಗ್ಗೆ ಇಲಾಖಾ ಅಧಿಕಾರಿಗಳಿಗೆ ಸೂಕ್ತ ಮಾಹಿತಿಯಿಲ್ಲ. ಆದ್ದರಿಂದ ವಾರದೊಳಗೆ ಈ ಬಗ್ಗೆ ವಿವರವಾದ ಮಾಹಿತಿಯ ವರದಿ ಸಲ್ಲಿಸಬೇಕು ಎಂದರು.
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಇತ್ತೀಚೆಗೆ ಅರಣ್ಯ ಸಚಿವರು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದಾಗ, ಅಂಜನಾದ್ರಿ ಬೆಟ್ಟವು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವುದರಿಂದ ಬೆಟ್ಟದಲ್ಲಿ ಅರಣ್ಯ ಇಲಾಖೆಯಿಂದಲೇ ರೋಪ್ ವೇ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ ಎಂದರು. ಸಚಿವರು ಪ್ರತಿಕ್ರಿಯಿಸಿ, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಅಲ್ಲದೇ ಗಿಣಿಗೇರಾ ಕೆರೆ ಅಭಿವೃದ್ಧಿ ಮಾಡಲಾಗುತ್ತಿದ್ದು, ಅಲ್ಲಿ ಬಹಳಷ್ಟು ಸ್ಥಳಾವಕಾಶವಿದೆ ಅರಣ್ಯ ಇಲಾಖೆಯಿಂದ ವಿವಿಧ ಬಣ್ಣದ ಹೂವಿನ ಗಿಡಮರ ಬೆಳೆಸುವಂತೆ ಸೂಚನೆ ನೀಡಿದರು. ಯಲಬುರ್ಗಾ ತಾಲೂಕಿನಲ್ಲಿ ಕೆಆರ್‌ಐಡಿಎಲ್ ನಿಂದ ಕೈಗೊಂಡ ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರದ ಕುರಿತು ಆರೋಪ ಕೇಳಿಬಂದಿದ್ದು, ಈ ಬಗ್ಗೆ ಶಾಸಕರಿಂದ ಪಟ್ಟಿ ಪಡೆದು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಂದ ವಿಚಾರಣೆ ನಡೆಸಿ ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಪಂ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ್, ಸಂಸದ ಕರಡಿ ಸಂಗಣ್ಣ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಹಾಲಪ್ಪ ಆಚಾರ್, ಬಸವರಾಜ ದಢೇಸುಗೂರು, ಜಿಪಂ ಉಪಾಧ್ಯಕ್ಷೆ ಬಿನಾಗೌಸ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ, ಜಿಪಂ ಸಿಇಒ ರಘುನಂದನ್ ಮೂರ್ತಿ, ಎಸ್‌ಪಿ ಟಿ. ಶ್ರೀಧರ್, ಎಡಿಸಿ ಎಂ.ಪಿ. ಮಾರುತಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ ಗೋನಾಳ ಇತರರಿದ್ದರು.