ಹಾವೇರಿ: ಪೂರ್ಣ ಪ್ರಮಾಣದ ಶಾಲೆ ಆರಂಭಿಸಿ. ಆನ್ ಲೈನ್ ಕ್ಲಾಸ್ ನಿಂದ ನಮಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳೂ ಹೇಳಿದ್ದಾರೆ. ಒಂದು ವಾರ ಅಥವಾ 10 ದಿನ ಕಾದು ನೋಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರನೇ ಅಲೆ ಬಗ್ಗೆ ಚರ್ಚೆ ಆಗುತ್ತಿದೆ. ಹೀಗಾಗಿ ಮಕ್ಕಳ ಆರೋಗ್ಯದ ಮೇಲೆ ಕಾಳಜಿ ವಹಿಸಲಾಗುತ್ತಿದೆ ಎಂದರು.
ಕಳೆದ 23 ನೇ ತಾರೀಖಿನಿಂದ ಶಾಲೆ ಪ್ರಾರಂಭಿಸಿದ್ದೇವೆ. ತುಂಬಾ ಒಳ್ಳೆಯ ರೆಸ್ಪಾನ್ಸ್ ನಮಗೆ ಸಿಕ್ಕಿದೆ. 6,7,8 ನೇ ತರಗತಿ ಸೆ.6ರಿಂದ ಪ್ರಾರಂಭವಾಗುತ್ತವೆ. ಪೋಷಕರು ಶಾಲೆಗಳಿಗೆ ಬಂದು ಒಂದನೇ ತರಗತಿಯಿಂದಲೇ ಶಾಲೆ ಪ್ರಾರಂಭಿಸಿ ಎಂದು ಹೇಳಿದ್ದಾರೆ. ಮಕ್ಕಳ ಇಚ್ಚೆ ನೋಡಿಕೊಂಡೇ ಮುಂದಿನ ದಿನಗಳಲ್ಲಿ 1 ರಿಂದ 5ರವರಗೆ ಶಾಲೆ ಆರಂಭ ಮಾಡುತ್ತೇವೆ ಎಂದರು.
ಇದನ್ನೂ ಓದಿ:ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಪ್ರಕರಣದ ಆರೋಪಿ ಪಿಎಸ್ಐ ಗೆ ನ್ಯಾಯಾಂಗ ಬಂಧನ
ಕೆಲವು ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿವೆ. ನಗರ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳಿಂದ ಈ ರೀತಿ ಸಮಸ್ಯೆ ಆಗುತ್ತಿದೆ. ಆಂಧ್ರದಲ್ಲಿ ಈಗಾಗಲೇ ಒಂದು ಕಾನೂನು ತಂದಿದ್ದಾರೆ. ಆಂಧ್ರ ಮಾದರಿಯಲ್ಲಿ ಕಾನೂನು ರೂಪಿಸುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗುವುದು. ಶಾಲೆಗಳಲ್ಲಿ ಶೌಚಾಲಯಗಳು ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.