Advertisement

ದೇಶದ ಪ್ರಮುಖ ನಗರಗಳಿಗೆ 5ಜಿ ಸೇವೆ: 2023ರ ಡಿಸೆಂಬರ್‌ ಒಳಗೆ ಹೈಡ್ರೋಜನ್‌ ರೈಲು

12:17 AM Dec 19, 2022 | Team Udayavani |

ಬೆಂಗಳೂರು: ಮುಂದಿನ ದೀಪಾವಳಿ ವೇಳೆಗೆ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ 5ಜಿ ಸೇವೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೇ ಮತ್ತು ಐಟಿ ಇಲಾಖೆ ಸಚಿವ ಅಶ್ವಿ‌ನಿ ವೈಷ್ಣವ್‌ ಹೇಳಿದರು.

Advertisement

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿ, ಡಿಜಿಟಲ್‌ ಇಂಡಿಯಾ ಕಾಯ್ದೆ ಶೀಘ್ರ ಜಾರಿಯಾಗಲಿದೆ. ಸದ್ಯದ ಸ್ಥಿತಿಗತಿಗಳನ್ನು ಪರಿಗಣಿಸಿ ಹೊಸ ಕಾಯಿದೆ, ನಿಯಮಾವಳಿಗಳನ್ನು ರೂಪಿಸಲು ಚಿಂತಿಸಲಾಗಿದೆ. ಈಗಾಗಲೇ ಬಿಡುಗಡೆಗೊಳಿಸಿರುವ ಹೊಸ ಡಿಜಿಟಲ್‌ ವೈಯಕ್ತಿಕ ದತ್ತಾಂಶ ರಕ್ಷಣಾ ವಿಧೇಯಕ-2022ಕ್ಕೆ ಜನರಿಂದ ಒಳ್ಳೆಯ ಸ್ಪಂದನೆ ದೊರೆತಿದೆ. ಸಾಫ್ಟ್ವೇರ್‌ ಕ್ಷೇತ್ರದ ದಿಗ್ಗಜರಾದ ಟಿ.ವಿ. ಮೋಹನ್‌ದಾಸ್‌ ಪೈ, ನಂದನ್‌ ನಿಲೇಕಣಿ, ಕ್ರಿಸ್‌ ಗೋಪಾಲಕೃಷ್ಣನ್‌ ಅವರಂತಹ ಘಟಾನುಘಟಿಗಳು ಈ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ಕೊಟ್ಟಿರುವುದರಿಂದ ಇನ್ನಷ್ಟು ವಿಶ್ವಾಸ ಹೆಚ್ಚಿದೆ. ಇನ್ನು ಭಾರತೀಯ ಟೆಲಿಕಮ್ಯುನಿಕೇಷನ್‌ ವಿಧೇಯಕ- 2022ರ ಕರಡಿಗೆ ಆಕ್ಷೇಪಣೆ ಸಲ್ಲಿಸಲು ಆಹ್ವಾನಿಸಲಾಗಿದೆ ಎಂದು ಹೇಳಿದರು.

2023 ಡಿಸೆಂಬರ್‌ ಒಳಗೆ ಹೈಡ್ರೋಜನ್‌ ರೈಲು: 2023ರ ಡಿಸೆಂಬರ್‌ ಒಳಗೆ ದೇಶದಲ್ಲಿ ಮೊದಲ ಹೈಡ್ರೋಜನ್‌ ರೈಲು ಸಂಚರಿಸಲಿದೆ. ಹೈಡ್ರೋಜನ್‌ ರೈಲು ಸಂಚಾರಕ್ಕೆ ಬೇಕಾದ ವ್ಯವಸ್ಥೆಗಳು ನಡೆಯುತ್ತಿವೆ. ಇದರ ಜತೆಗೆ ಬುಲೆಟ್‌ ರೈಲು ಬೋಗಿಗಳ ನಿರ್ಮಾಣವೂ ವೇಗ ಪಡೆದುಕೊಂಡಿದೆ. ಸದ್ಯದಲ್ಲೇ ಮುಂಬೈ-ಅಹ್ಮದಾಬಾದ್‌ ನಡುವೆ ಮೊದಲ ಬುಲೆಟ್‌ ರೈಲು ಸಂಚಾರ ಮಾಡಲಿದೆ. ಇದುವರೆಗೆ 116 ಕಿ.ಮೀ.ವರೆಗೆ ಬುಲೆಟ್‌ ಹಳಿ ನಿರ್ಮಾಣವಾಗಿದ್ದು, ಬುಲೆಟ್‌ ರೈಲಿನ ವೇಗ ಗಂಟೆಗೆ 320 ಕಿ.ಮೀ. ಇರಲಿದೆ ಎಂದು ವಿವರಿಸಿದರು.

43 ರೈಲ್ವೇ ನಿಲ್ದಾಣ ವಿಶ್ವದರ್ಜೆಗೆ: ಯಶವಂತಪುರ ಹಾಗೂ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣ ಒಳಗೊಂಡಂತೆ ಕರ್ನಾಟಕದ 43 ರೈಲ್ವೇ ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸಲಾಗುವುದು. ಜತೆಗೆ ಇನ್ನೂ 50 ರೈಲ್ವೆ ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸುವ ಗುರಿ ಹೊಂದಲಾಗಿದೆ. ಎಲ್‌ ಆ್ಯಂಡ್‌ ಟಿ ಕಂಪನಿಯು ಬೆಂಗಳೂರು ಮಹಾನಗರಕ್ಕೆ ಹೊರ ವರ್ತೂಲ ರೈಲು ಟೆಂಡರ್‌ ತೆಗೆದುಕೊಂಡಿದೆ. ಅಧಿಕೃತವಾಗಿ ಶೀಘ್ರದಲ್ಲೇ ಸರ್ಕಾರದಿಂದ ಹಸ್ತಾಂತರ ಮಾಡಲಾಗುವುದು.

ಒಂದೇ ಭಾರತ್‌: 6 ಬೋಗಿ ನಿರ್ಮಾಣ ಗುರಿ
ವಂದೇ ಭಾರತ್‌ ರೈಲಿಗೆ ಸದ್ಯ ತಿಂಗಳಿಗೆ ಮೂರು ರೈಲು ಬೋಗಿಗಳ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 6 ಬೋಗಿಗಳ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ. ಈ ಪೈಕಿ ಶೇ.28 ರವರೆಗೆ ರೈಲ್ವೇ ಇಲಾಖೆಯು ತನ್ನ ಮಾರುಕಟ್ಟೆಯ ಲಾಭ ಪಡೆಯಲಿದೆ. ಗಂಟೆಗೆ 180 ಕಿ.ಮೀ. ವರೆಗೆ ವೇಗ ವೃದ್ಧಿಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದರು.

Advertisement

ಆನ್‌ಲೈನ್‌ ಗೇಮ್‌ ನಿರ್ಬಂಧಕ್ಕೆ ಚಿಂತನೆ
ಸಾರ್ವಜನಿಕ ವಲಯಗಳಲ್ಲಿ ಆನ್‌ಲೈನ್‌ ಗೇಮ್‌ಗಳ ಜಾಹೀರಾತು ನಿರ್ಬಂಧಕ್ಕೆ ಒತ್ತಾಯ ಕೇಳಿ ಬರುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶ್ವಿ‌ನಿ ವೈಷ್ಣವ್‌, ಆನ್‌ಲೈನ್‌ ಗೇಮ್‌ ನಿರ್ಬಂಧ ಮಾಡುವ ಕುರಿತು ಕೇಂದ್ರ ಮಟ್ಟದಲ್ಲಿ ಚರ್ಚೆಗಳಾಗಿವೆ. ದೇಶದ ಬಹುತೇಕ ರಾಜ್ಯಗಳು ಆನ್‌ಲೈನ್‌ ಗೇಮ್‌ ನಿರ್ಬಂಧಿಸಲು ಉತ್ಸಾಹ ತೋರಿದೆ. ಆನ್‌ಲೈನ್‌ ಗೇಮ್‌ ಬಗ್ಗೆ ನೂತನ ಕಾನೂನು ಜಾರಿ ಮಾಡುವ ಬಗ್ಗೆ ಶೀಘ್ರದಲ್ಲೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next