Advertisement

ರಾಮನಗರ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಸಚಿವ ಅಶ್ವತ್ಥ ನಾರಾಯಣ ಭೇಟಿ

12:29 PM Aug 08, 2022 | Team Udayavani |

ರಾಮನಗರ: ಸತತ ಮತ್ತು ಮೇರೆ ಮೀರಿದ ಮಳೆಯಿಂದಾಗಿ ಕಂಗೆಟ್ಟಿರುವ ಜಿಲ್ಲೆಯ ನಾನಾ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ಸೋಮವಾರ ಭೇಟಿ ನೀಡಿದರು.

Advertisement

ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ಕೆರೆಗೆ ನೀರು ನುಗ್ಗಿ ಮನೆಮಠ ಕಳೆದುಕೊಂಡಿರುವ 36 ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಮಾಗಡಿ ಶಾಸಕ ಮಂಜುನಾಥ್ ಇದ್ದರು.

ನಂತರ ತುಂಬಿ ತುಳುಕುತ್ತಿರುವ ಮಾಯಸಂದ್ರ ಕೆರೆಗೆ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಅವರು ಮನೆ ಕಳೆದುಕೊಂಡಿರುವ ಯಲ್ಲಾಪುರ, ಮುತ್ತುಗದಹಳ್ಳಿ, ಕೆಂಚನಪಾಳ್ಯಗಳ ಒಟ್ಟು 7 ಮಂದಿಗೆ ಒಟ್ಟು 5 ಲಕ್ಷ ರೂ. ಪರಿಹಾರ ವಿತರಿಸಿದರು. ಈ ಪೈಕಿ ಮನೆ ವಿಪರೀತ ಹಾನಿಗೊಳಗಾಗಿರುವ ಮೂವರಿಗೆ ತಲಾ 95 ಸಾವಿರ ರೂ. ನೀಡಲಾಯಿತು.

ಬಳಿಕ, ಈಡಿಗರ ಪಾಳ್ಯಕ್ಕೆ ಸಚಿವರು ತೆರಳಿ, ಉಕ್ಕಿ ಹರಿಯುತ್ತಿರುವ ಕಾಲುವೆಯನ್ನು ವೀಕ್ಷಿಸಿದರು.  ಆಗ ಊರಿನ ಜನರು, ಸರಿಯಾದ ಸೇತುವೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಆದಷ್ಟು ಬೇಗ ಇದನ್ನು ಪೂರೈಸುವುದಾಗಿ ಆಶ್ವಾಸನೆ ಕೊಟ್ಟರು.

ಬೆಳಿಗ್ಗೆ ಮೊದಲಿಗೆ ಸೋಲೂರು ಹೋಬಳಿಯ ಕೂಡ್ಲೂರು ಗೇಟ್ ನಲ್ಲಿ, ಗೋಡೆ ಕುಸಿದು ಇಬ್ಬರು ನೇಪಾಳಿ ಮಕ್ಕಳು ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, ‘ಈ ಮಕ್ಕಳು ನೇಪಾಳಿ ಕುಟುಂಬಕ್ಕೆ ಸೇರಿದವರಾದ್ದರಿಂದ ಪರಿಹಾರ ಕೊಡಲು ತಾಂತ್ರಿಕ ಅಡಚಣೆಗಳಿವೆ. ಆದರೂ ಪರಿಹಾರದ ಚೆಕ್ ಸಿದ್ಧಪಡಿಸಿ ಇಡಲಾಗಿದೆ. ಇರುವ ತೊಡಕುಗಳನ್ನು ನಿವಾರಿಸಿ 2-3 ದಿನಗಳಲ್ಲಿ ಚೆಕ್ ಕೊಡಲಾಗುವುದು’ ಎಂದು ಭರವಸೆ ನೀಡಿದರು.

ಇದನ್ನೂ ಓದಿ:ರಾಜಸ್ಥಾನ: ಮೈನಿಂಗ್ ಮಾಫಿಯಾ-ಬಿಜೆಪಿ ಸಂಸದೆ ಮೇಲೆ ದಾಳಿಗೆ ಯತ್ನ; ದೂರು ದಾಖಲು

ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನೆರೆಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆ ಇಲ್ಲ. ಇದಕ್ಕೆ ಸಂಬಂಧಿಸಿದ ಖಾತೆಯಲ್ಲಿ 16 ಕೋಟಿ ರೂ. ಇದೆ. ತಹಸೀಲ್ದಾರ್ ಅವರ ಖಾತೆಯಲ್ಲಿ 2.5 ಕೋಟಿ ರೂ. ಹಣ ಇದೆ. ಆದ್ದರಿಂದ ಯಾರೂ ತಪ್ಪು ಮಾಹಿತಿಯನ್ನು ನಂಬಬಾರದು’ ಎಂದು ಅವರು ಸ್ಪಷ್ಟ ಪಡಿಸಿದರು.

ನೆರೆಯಿಂದ ಸಂತ್ರಸ್ತರಾಗಿರುವ ಎಲ್ಲರಿಗೂ ತಕ್ಷಣವೇ ಪರಿಹಾರ ಕೊಡಲಾಗುವುದು ಎಂದು ಸಚಿವರು ನುಡಿದರು.

ನೆರೆ ಸಂಬಂಧದ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇವಕ್ಕೆಲ್ಲ ಕೇಂದ್ರ ಸರ್ಕಾರದ ಸಹಾಯವೂ ಇದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

ಸಂಕೀಘಟ್ಟ ಕೆರೆಗೂ ಸಚಿವರು ಭೇಟಿ ನೀಡಿ ಬಾಗಿನ ಅರ್ಪಿಸಿದರು. ಸಚಿವರ ಭೇಟಿಯ ಸಂದರ್ಭದಲ್ಲಿ ಜಿಲಾಧಿಕಾರಿ ಅವಿನಾಶ ಮೆನನ್, ಜಿಪಂ ಸಿಇಒ ದಿಗ್ವಿಜಯ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿ ಜತೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next