ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 66ರಲ್ಲಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಭಾನುವಾರ ಪಾದಯಾತ್ರೆ ನಡೆಸಿ ಜನರ ಕುಂದುಕೊರತೆಗಳನ್ನು ಆಲಿಸಿದರು.
ಸುಬ್ರಹ್ಮಣ್ಯ ನಗರ ವಾರ್ಡಿನ ಕರುಮಾರಿಯಮ್ಮ ದೇವಸ್ಥಾನದ ರಸ್ತೆ ಮತ್ತು ರೈಲ್ವೆ ಪ್ಯಾರಲಲ್ ರಸ್ತೆಯ ಉದ್ದಕ್ಕೂ ಪಾದಯಾತ್ರೆ ಕೈಗೊಂಡ ಅವರು ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿ ಸಾರ್ವಜನಿಕರಿಗೆ ಸಮಾಧಾನ ಹೇಳಿದರು.
ಪಾದಯಾತ್ರೆಯ ಮಧ್ಯೆ ಮಹಿಳೆ ಒಬ್ಬರು ಮಾತನಾಡಿ, ಪೌರಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿಕೆ ಸಲ್ಲಿಸಿದರು.
ಇದರ ಬಗ್ಗೆ ಮಾತನಾಡಿದ ಸಚಿವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಇದೆ ಮೊದಲ ಬಾರಿಗೆ ಪೌರಕಾರ್ಮಿಕರಿಗೆ ತಿಂಗಳಿಗೊಮ್ಮೆ ವಿಶೇಷ ಭತ್ಯೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಲಾಗುವುದು ಎಂದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ನೀರಿನ ಕೊಳವೆಗಳು ಶಿಥಿಲವಾಗಿದ್ದು ಅವುಗಳನ್ನು ಬದಲಿಸಲಾಗುತ್ತಿದೆ. ಹೀಗಾಗಿ ಕ್ಷೇತ್ರದಲ್ಲಿ ನೀರಿಗೆ ಕೊಳಚೆ ಮತ್ತು ಕೆಸರು ಮಿಶ್ರಣವಾಗುವುದು ತಪ್ಪಿದೆ. ಅಲ್ಲದೆ, 2,500 ಮ್ಯಾನ್-ಹೋಲುಗಳನ್ನು ಬದಲಿಸಲಾಗಿದೆ. ಇಷ್ಟು ವರ್ಷಗಳ ಕಾಲ ಆಗಿದ್ದ ಆಗುತ್ತಿದ್ದ ನೀರಿನ ಅಪವ್ಯಯವನ್ನು ನಿಲ್ಲಿಸಲಾಗಿದೆ ಎಂದು ಅವರು ಮನದಟ್ಟು ಮಾಡಿಕೊಟ್ಟರು.
ಪಾದಯಾತ್ರೆಯ ನಡುವೆ ಮತ್ತೊಬ್ಬ ಹಿರಿಯ ಮಹಿಳೆ, ಸಚಿವರಿಗೆ ಆರತಿ ಎತ್ತಿ, ದೃಷ್ಟಿ ನಿವಾರಣೆ ಮಾಡಿದರು. ಸಚಿವರು ಮತ್ತೊಂದು ಮನೆಯಲ್ಲಿ ಪೂಜೆಯಲ್ಲಿ ಪಾಲ್ಗೊಂಡು, ಎಲ್ಲರೊಂದಿಗೂ ಮುಕ್ತವಾಗಿ ಒಡನಾಡಿದರು.