ಹುಬ್ಬಳ್ಳಿ: ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿನ ಎಲ್ಲ ಗೊಂದಲಗಳು ನಿವಾರಣೆಯಾಗಿವೆ. ಈ ಬಗ್ಗೆ ಮತ್ತೆ ಚರ್ಚೆ ನಡೆಸುವ ಅಗತ್ಯವಿಲ್ಲವೆಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಇತಿಹಾಸ ದೊಡ್ಡದಿದೆ. ಇನ್ನೂ ನಾವು ಮೊಘಲರ ವೈಭವೀಕರಣ ಮಾಡುತ್ತ ಕುಳಿತುಕೊಳ್ಳಲು ಆಗಲ್ಲ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಹೇಳಿರುವುದು ಸರಿಯಾಗಿದೆ ಎಂದು ಶಾ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಬೇರೆ ಪಕ್ಷಗಳಿಗಿಂತ ಬಿಜೆಪಿ ಉತ್ತಮ ಭವಿಷ್ಯವುಳ್ಳ ಪಕ್ಷ. ಇಲ್ಲಿ ಅವಕಾಶಗಳಿವೆ. ಹೀಗಾಗಿ ಕೆಲವರು ಕುಟುಂಬ ಪಕ್ಷ ಮತ್ತು ಇತರೆ ಕಾರಣಗಳಿಂದ ಬೇಸತ್ತು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಯಾರು ಬರುತ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದರು.
ಉತ್ತ ಪ್ರದೇಶದಲ್ಲಿ ಹಿಂಸಾಚಾರ ಹೋರಾಟ ಹಿನ್ನೆಲೆ ಒಂದು ಹೇಳಿಕೆಯನ್ನಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ದೇಶದ ಐಕ್ಯತೆ ವಿಚಾರದಲ್ಲಿ ಹಿಂಸಾಚಾರ ನಡೆಸುವುದು ಸರಿಯಲ್ಲ ಎಂದರು.
ರಾಜ್ಯಸಭೆಯಲ್ಲಿ ಎ ಟೀಮ್ ಬಿ ಟೀಮ್ ಅಂತ ಎಂಬ ಪ್ರಶ್ನೆಯೇ ಇಲ್ಲ. ನಮ್ಮ ಸಂಖ್ಯಾಬಲ ಜಾಸ್ತಿ ಇದೆ. ಹೀಗಾಗಿ ಸಹಜವಾಗಿ ಗೆಲುವಾಗಿದೆ ಎಂದರು.