ಮಾಲೂರು: ತಪ್ಪು ಮಾಡಿದವರು ಎಂದಿಗೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಾಡಿದ ವ್ಯವಹಾರಗಳಿಗೆ ಸರಿಯಾದ ಲೆಕ್ಕ ಇಟ್ಟರೆ ಇಡಿ ಅಲ್ಲ, ಯಾವುದೇ ತನಿಖಾ ಸಂಸ್ಥೆಯಿಂದ ಏನೂ ಮಾಡಲಾಗದು ಎಂದು ಸಚಿವ ಅಶ್ವತ್ಥನಾರಾಯಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಟಾಂಗ್ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಅದು ಬಿಟ್ಟು ತಮ್ಮ ಹುಳಕುಗಳನ್ನು ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ದೂರು ಹಾಕುವುದು ಸರಿಯಲ್ಲ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ರಾಜ್ಯದ ಜನರೇನು ಕಣ್ಣು ಮುಚ್ಚಿ ಕೂತಿಲ್ಲ, ಅವರವರ ಕಾರ್ಯಕ್ಷಮತೆಯಂತೆ ಜನರು ಅಧಿ ಕಾರ ನೀಡುತ್ತಾರೆ ಎಂದು ಹೇಳಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ ನೀಡಿರುವ ಸಾರ್ವಜನಿಕರು ಭ್ರಷ್ಟಾಚಾರ ಮುಕ್ತ ಭಾರತವನ್ನು ನೋಡಲು ಕಾತುರರಾಗಿದ್ದಾರೆ. ಕರ್ನಾಟಕದಲ್ಲಿ ಬಲವಂತದ ಮತಾಂತರ ಕಾಯ್ದೆ ಜಾರಿಗೆ ಕಾಂಗ್ರೆಸ್ ವಿರೋಧಿಸುತ್ತಿದೆ. ಸಾರ್ವಜನಿಕರು ಇಚ್ಛೆಯಿಂದ ಮತಾಂತರವಾದಲ್ಲಿ ಯಾರ ಅಭ್ಯಂತರವೂ ಇಲ್ಲ. ಆದರೆ, ಅಸೆ ಆಮಿಷಗಳಿಂದ ಬಲವಂತದ ಮತಾಂತರ ಮಾಡುವುದನ್ನು ಸರ್ಕಾರ ಮತ್ತು ಬಿಜೆಪಿ ಸಹಿಸುವುದಿಲ್ಲ ಎಂದರು.