Advertisement

ಆರೋಗ್ಯ ಕಿಟ್‌ ಯೋಜನೆಗೆ ಸಚಿವ ಮೆಚ್ಚುಗೆ

12:40 AM Nov 24, 2019 | Team Udayavani |

ಬೆಂಗಳೂರು/ಆನೇಕಲ್‌: ಆನೇಕಲ್‌ ತಾಲೂಕಿನ ಮರಸೂರು ಗ್ರಾಮ ಪಂಚಾಯ್ತಿ ಕಾರ್ಯ ವೈಖರಿಗೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. “ಸರ್ಕಾರಿ ಶಾಲೆಯ ಮಕ್ಕಳಿಗೆ ಆರೋಗ್ಯದ ಕಿಟ್‌’ ವಿತರಣೆ ಮಾಡಿ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಗೆ ಮಾದರಿ ಗ್ರಾಮ ಪಂಚಾಯ್ತಿ ಎಸಿಕೊಂಡಿರುವುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಈ ಬಗ್ಗೆ “ಉದಯವಾಣಿ’ ಶನಿವಾರ (ನ.23) “ಸರ್ಕಾರಿ ಶಾಲೆ ಮಕ್ಕಳಿಗೆ ಆರೋಗ್ಯ ಕಿಟ್‌’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿ ಓದಿದ ಸಚಿವ ಸುರೇಶ್‌ ಕುಮಾರ್‌ ಅವರು ಶನಿವಾರ ಬೆಳಗ್ಗೆ ಮರಸೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಅಲ್ಲಿನ ಆಡಳಿತ ಸಿಬ್ಬಂದಿಯನ್ನು ಅಭಿನಂದಿಸಿದರು. ಶಾಲಾ ಮಕ್ಕಳಿಗೆ ಒಳಿತಾಗುವಂತಹ ಇಂತಹ ಮತ್ತಷ್ಟು ಕಾರ್ಯ ಕ್ರಮಗಳನ್ನು ರೂಪಿಸುವಂತೆ ತಿಳಿಸಿದರು.

ಸ್ಮಾರ್ಟ್‌ ರೂಮ್‌ ವ್ಯವಸ್ಥೆ ಕಲ್ಪಿಸಿ: ಬಳಿಕ ಮಾತನಾಡಿದ ಸುರೇಶ್‌ ಕುಮಾರ್‌, ಸರ್ಕಾರಿ ಶಾಲೆಗಳಿಗಾಗಿಯೇ ಮರಸೂರು ಗ್ರಾಮ ಪಂಚಾಯಿತಿ ವರ್ಷಕ್ಕೆ ಸುಮಾರು 40 ರಿಂದ 50 ಲಕ್ಷ ರೂ. ವೆಚ್ಚ ಮಾಡುತ್ತಿದೆ. ಇದು ಸ್ವಾಗತಾರ್ಹ ವಿಚಾರ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ “ಸ್ಮಾರ್ಟ್‌ ರೂಮ್‌’ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.

ಕೇರಳದಲ್ಲಿ ಈಗಾಗಲೇ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ ರೂಮ್‌ ವ್ಯವಸ್ಥೆ ಇದೆ. ಇಲ್ಲಿ ಡಿಜಿಟಲ್‌ ಪರದೆ ಇರುವುದರಿಂದ ವಿದ್ಯಾರ್ಥಿಗಳ ಕಲಿಕೆಗೂ ಅನುಕೂಲವಾಗಲಿದೆ. ಸರ್ಕಾರ ಎಲ್ಲಾ ಶಾಲೆಗಳಿಗೂ ಸ್ಮಾರ್ಟ್‌ ರೂಮ್‌ ವ್ಯವಸ್ಥೆ ಕಲ್ಪಿಸುವುದು ಅಸಾಧ್ಯ. ಆ ಕೆಲಸವನ್ನು ಮರಸೂರು ಗ್ರಾಮ ಪಂಚಾಯಿತಿ ಮಾಡಿದರೆ. ಇಡೀ ರಾಜ್ಯಕ್ಕೆ ಮಾದರಿ ಎನಿಸಲಿದೆ ಎಂದು ಹೇಳಿದರು.

ಇದೇ ವೇಳೆ ಮರಸೂರು ಗ್ರಾಮದ ಸರ್ಕಾರಿ ಶಾಲೆಗಳಿಗೆ ಸುರೇಶ್‌ಕುಮಾರ್‌ ಅವರು ಭೇಟಿ ನೀಡಿದರು. ಗ್ರಾ.ಪಂ ಅಧ್ಯಕ್ಷ ಪ್ರಭಾಕರ ರೆಡ್ಡಿ, ಜಿ.ಪಂ ಸದಸ್ಯ ರಾಮಚಂದ್ರಪ್ಪ, ತಾ.ಪಂ ಸದಸ್ಯ ರಾಮಕೃಷ್ಣ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಮೂರ್ತಿ, ಪಿಡಿಒ ಶಶಿಕಿರಣ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಪಾಠ ಮಾಡಿದ ಸುರೇಶ್‌ ಮೇಸ್ಟ್ರೆ: ಬೆಳಗ್ಗೆ 11 ಗಂಟೆ ಸುಮಾರಿಗೆ ಮರಸೂರು ಶಾಲೆಗೆ ಆಗಮಿಸಿದ ಸಚಿವ ಸುರೇಶ್‌ ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಎಲ್ಲ ತರಗತಿಗೆಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಶಿಕ್ಷಣ, ಬೋಧನೆ ಕುರಿತು ಸಂವಾದ ನಡೆಸಿದರು. ವಿದ್ಯಾರ್ಥಿಯಿಂದ 10ನೇ ತರಗತಿ ಪಠ್ಯ ಪುಸ್ತಕ ಒಂದನ್ನು ಪಡೆದು ಪಾಠ ಕೂಡ ಮಾಡಿದರು. ಮಕ್ಕಳಿಗೆ ಹಲವು ಪ್ರಶ್ನೆ ಕೇಳಿ ಅವರ ಗ್ರಹಿಕೆ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

“ಉದಯವಾಣಿ’ ವರದಿ ನೋಡಿ ಬಂದೆ: ಮರಸೂರು ಸರ್ಕಾರಿ ಶಾಲೆ ಮಕ್ಕಳಿಗೆ ಪಂಚಾಯಿತಿ ವತಿಯಿಂದ ಆರೋಗ್ಯ ಕಿಟ್‌ ನೀಡುತ್ತಿರುವ ಕುರಿತು ಇಂದು (ಶನಿವಾರ) “ಉದಯವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿ ಓದಿ ನಾನು ಶಾಲೆಗೆ ಭೇಟಿ ನೀಡಿದ್ದೇನೆ. ಶಾಲೆ ವಾತಾವರಣ ನನ್ನ ಊಹೆಗೂ ಮೀರಿ ಉತ್ತಮವಾಗಿದೆ. ಹಾಗೇ ಮಕ್ಕಳ ಕಲಿಕೆ ಗುಣಮಟ್ಟವೂ ಉತ್ತಮವಾಗಿದೆ. ಈ ಶಾಲೆ ಇತರೆ ಶಾಲೆಗಳಿಗೆ ಮಾದರಿ ಎಂಬುದರಲ್ಲಿ ಎರಡನೇ ಮಾತಿಲ್ಲ ಎಂದು ಸಚಿವರು ಹೇಳಿದರು.

ಸಂವಿಧಾನದ ಕುರಿತಾಗಲಿ, ಅಂಬೇಡ್ಕರ್‌ ಅವರಿಗೆ ಅವಹೇಳನ ಮಾಡುವ ರೀತಿಯಲ್ಲಾಗಲಿ ನಾನು ಮಾತನಾಡಿಲ್ಲ. ನನ್ನಿಂದ ಅಂಬೇಡ್ಕರ್‌ ಅವರ ಗೌರವಕ್ಕೆ ಸ್ವಲ್ಪವೇ ಚ್ಯುತಿಯಾಗಿದೆ ಎಂದಾದರೂ ನನ್ನನ್ನು ಬಹಿರಂಗವಾಗಿ ನೇಣುಗಂಬಕ್ಕೇರುತ್ತೇನೆ.
-ಸುರೇಶ್‌ ಕುಮಾರ್‌, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next