ಕೊಳ್ಳೇಗಾಲ: ರೈತರಲ್ಲಿ ಆದಾಯ ಮತ್ತು ಉದ್ಯೋಗ ಸೃಷ್ಟಿಸುವ ಸಲುವಾಗಿ ಮೀನು ಕೃಷಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವು ದಾಗಿ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ ಭಾನುವಾರ ಹೇಳಿದರು.
ತಾಲೂಕಿನ ಗುಂಡಾಲ್ ಜಲಾಶ ಯದ ಬಳಿ ಇರುವ ಮೀನು ಉತ್ಪಾದನಾ ಮತ್ತು ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ರೈತರು ಕೇವಲ ಆಹಾರ ಪದಾರ್ಥ ಬೆಳೆಗಷ್ಟೆ ಸೀಮಿತವಾಗದೆ ಮೀನು ಕೃಷಿಗೂ ಹೆಚ್ಚು ಗಮನ ಹರಿಸಿ ಅದರಿಂದ ಹೆಚ್ಚು ಆದಾಯ ಗಳಿಸುವಂತೆ ಮಾಡುವ ಸಲುವಾಗಿ ಮೀನು ಕೃಷಿಯನ್ನು ಅವಲಂಭಿಸುವಂತೆ ತಿಳುವಳಿಕೆ ನೀಡಲಾಗುತ್ತಿದೆ ಎಂದರು.
ಮೀನು ಕೃಷಿಗೆ ರೈತರನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವ ಸಲುವಾಗಿ ಈಗಾಗಲೇ 13 ಜಿಲ್ಲೆಗಳಿಗೆ ಭೇಟಿ ನೀಡಿ ಮೀನು ಉತ್ಪಾದನಾ ಕೇಂದ್ರವನ್ನು ವೀಕ್ಷಣೆ ಮಾಡಿರುವುದಾಗಿ ಹೇಳಿದ ಸಚಿವರು ಮೀನು ಕೃಷಿಯನ್ನು ಎರಡು ಪಟ್ಟು ಜಾಸ್ತಿ ಮಾಡುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.
ಮೀನು ಕೃಷಿಯನ್ನು ಹೆಚ್ಚು ಪ್ರೋತ್ಸಾಹಿ ಸಲು ಈಗಾಗಲೇ ಗುಂಪುಗಳ ನಿರ್ಮಾಣ ಮಾಡಿ ಅವರಿಗೆ ಬೇಕಾದ ತರಬೇತಿ ಮತ್ತು ಸಲಹೆಗಳನ್ನು ನೀಡಲಾಗುತ್ತಿದೆ. ಶಾಶ್ವತವಾಗಿ ನೀರು ನಿಲ್ಲುವ ಸ್ಥಳದಲ್ಲಿ ಮೀನು ಕೃಷಿ ಕೇಂದ್ರಗಳನ್ನು ನಿರ್ಮಾಣ ಮಾಡಿ ಮರಿಗಳನ್ನು ಬಿಟ್ಟು ಮೀನು ಸಾಗಾಣಿಕೆ ಮಾಡಲಾಗುವುದು ಎಂದರು.
ಮೀನು ಉತ್ಪಾದನೆಯಿಂದ ರೈತರಿಗೆ ಸ್ವಯಂ ಉದ್ಯೋಗ ಲಭ್ಯವಾಗುತ್ತದೆ. ಬದಲಿ ಆದಾಯಕ್ಕೂ ಹೆಚ್ಚು ಅನುಕೂಲವಾಗಲಿದೆ ಎಂದರು.
ಮಂಗಳೂರಿನಂತಹ ಸಮುದ್ರ ಕೊರೆತ ನಿಲುಗಡೆ ಮಾಡಲು ಈ ಹಿಂದೆ ಕಲ್ಲುಗಳಿಂದ ಜೋಡಣೆ ಮಾಡಿ ಕಡಲು ಕೊರತೆವನ್ನು ತಡೆಯಲಾಗುತ್ತಿತ್ತು. ಆದರೆ ಈಗ ವೈಜ್ಞಾನಿಕ ರೀತಿಯಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಮಾಡಲಾಗುವುದು. ಉಳ್ಳಾಲದಿಂದ ಮತ್ತು ಕಾರವಾರದವರೆಗೆ 320 ಕಿ.ಮೀ. ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದರು.