ಸುಳ್ಯ : ಅಡಿಕೆಯ ಭವಿಷ್ಯದ ಬಗ್ಗೆ ಕೃಷಿಕರು ಯಾವುದೇ ಗೊಂದಲ ಅಥವಾ ಆತಂಕ ಪಡುವ ಅಗತ್ಯ ಇಲ್ಲ. ಅಡಿಕೆ ಕೃಷಿಕರ ಹಿತ ಕಾಯಲು ಸರಕಾರ ಸದಾ ಬದ್ಧವಾಗಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.
ಸುಳ್ಯದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಅಡಿಕೆ ಕೃಷಿಗೆ ಭವಿಷ್ಯವಿಲ್ಲ ಎಂದು ಗೃಹ ಸಚಿವರು ಹೇಳಿ ರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಕೊಂಡು ರಾಜಕೀಯವಾಗಿ ಲಾಭ ಪಡೆ
ಯಲು ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಅಡಿಕೆ ಬೆಳೆಗಾರರ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡೇ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದರು.
ಅಡಿಕೆ ಎಲೆ ಹಳದಿ ರೋಗ, ಎಲೆ ಚುಕ್ಕಿ ರೋಗದಿಂದ ಕೃಷಿ ನಾಶವಾಗುತ್ತಿದೆ. ರೋಗಕ್ಕೆ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ಸಂಶೋಧನೆ ಗಳು, ಪರಿಹಾರ ಸೂತ್ರಗಳು ನಡೆಯುತ್ತಿವೆ. ಔಷಧಗಳನ್ನು ನೀಡಲಾಗುತ್ತಿದೆ. ಹೀಗಿರುವಾಗ ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಪ್ರದೇಶಕ್ಕಿಂತ ಬೇರೆಡೆಯಲ್ಲಿ ಅಡಿಕೆ ಬೆಳೆದರೆ ಬೆಳೆ ಹೆಚ್ಚಾಗಿ ಕೃಷಿಕನಿಗೆ ನಷ್ಟ ಅಗುವ ಸಾಧ್ಯತೆ ಇದೆ.
ಕೃಷಿಕರ ಹಿತವನ್ನೂ, ಅಡಿಕೆಯ ಧಾರಣೆಯನ್ನು ಉಳಿಸಿಕೊಳ್ಳುವ ಅಗತ್ಯ ಸರಕಾರದ ಮೇಲಿದೆ. ನಮ್ಮ ಸರಕಾರ ಕೃಷಿಕರಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತ ಬಂದಿದೆ. ಆದ್ದರಿಂದ ಈಗಿರುವ ಅಡಿಕೆ ಬೆಳೆಗಾರರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಚಿವರು ಹೇಳಿಕೆ ನೀಡಿದ್ದಾರೆ ಎಂದು ಅಂಗಾರ ಸ್ಪಷ್ಟಪಡಿಸಿದರು.
ಕೃಷಿಯಲ್ಲಿ ಸಮತೋಲನ ಅಗತ್ಯ ಇದೆ. ಎಲ್ಲರೂ ಒಂದೇ ಬೆಳೆ ಬೆಳೆದರೆ ಅಸಮತೋಲನ ಆಗುವ ಅಪಾಯ ಇದೆ. ಆಹಾರ ಬೆಳೆ, ವಾಣಿಜ್ಯ ಬೆಳೆ ಎಂಬ ನೆಲೆಯಲ್ಲಿ ಸಮತೋಲನದ ಕೃಷಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಡಿಕೆ ಕೃಷಿಕರು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.