ಕಲಬುರಗಿ: ಕಳೆದ ವರ್ಷ 2021ರ ಜನೇವರಿ 26ರಂದು ಲಿಂಗೈಕ್ಯ ಚಂದ್ರಶೇಖರ ಪಾಟೀಲ ರೇವೂರ ಫೌಂಡೇಷನ್ ಪ್ರಾರಂಭಿಸಿರುವ ಉಚಿತ ಡಯಾಲಿಸೆಸ್ ಕೇಂದ್ರಕ್ಕಿಂದು ವರ್ಷ ತುಂಬಿದ್ದರ ಪ್ರಯುಕ್ತ ಡಯಾಲಿಸೆಸ್ ಕೇಂದ್ರಕ್ಕೆ ಬರುವ ರೋಗಿಗಳಿಗೆ ಹಾಗೂ ಮನೆಗೆ ತೆರಳುವ ರೋಗಿಗಳ ಅನುಕೂಲಕ್ಕಾಗಿ ಉಚಿತ ಆಂಬ್ಯುಲೆನ್ಸ್ ಸೇವೆಗೆ ಬೃಹತ್ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ಆರ್. ನಿರಾಣಿ ಚಾಲನೆ ನೀಡಿದರು.
ಶಾಸಕರಾಗಿದ್ದ ಲಿಂಗೈಕ್ಯ ಚಂದ್ರಶೇಖರ ಪಾಟೀಲ ರೇವೂರ ಜನ್ಮ ದಿನಾಚರಣೆಯಂದು ಕಳೆದ ವರ್ಷ ಉಚಿತ ಡಯಾಲಿಸೆಸ್ ಕೇಂದ್ರ ಆರಂಭಿಸುವ ಮೂಲಕ ಹಾಗೂ ಈಗ ಉಚಿತ ಅಂಬ್ಯುಲೆನ್ಸ್ ಸೇವೆ ಒದಗಿಸಿರುವುದು ಹಾಗೂ ಆಗಾಗ್ಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಜತೆಗೆ ರಕ್ತದಾನ ಶಿಬಿರಗಳ ಆಯೋಜಿಸುತ್ತಿರುವುದು ಮಾದರಿಯಾಗಿದೆ ಎಂದು ಸಚಿವರು ಶ್ಲಾಘಿಸಿದರು.
ಲಿಂಗೈಕ್ಯ ಚಂದ್ರಶೇಖರ ಪಾಟೀಲ ರೇವೂರ ನೇರ ನಡೆ-ನುಡಿ ವ್ಯಕ್ತಿವುಳ್ಳವರಾಗಿದ್ದರು. ಇದ್ದಿದ್ದನ್ನು ಇದ್ದ ಹಾಗೆ ಹೇಳುತ್ತಿದ್ದರು. ಒಳಗೊಂದು-ಹೊರಗೊಂದು ಇರಲಿಲ್ಲ. ತಾವಿಬ್ಬರು ಉತ್ತಮ್ಮ ಸ್ನೇಹಿತರಾಗಿದ್ದೇವು. ಅವರ ವ್ಯಕ್ತಿತ್ವವನ್ನು ಅವರ ಮಗ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮೈಗೂಢಿಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ಸೂಕ್ತ ವೈದ್ಯಕೀಯ ಸೇವೆ ಸಿಗದೇ ಕಂಗಾಲಾಗಿರುವ ಕುಟುಂಬಗಳಿಗೆ ನೆರವಾಗುವ ಅದರಲ್ಲೂ ಕಣ್ಣೀರು ಒರೆಸುವ ಕೆಲಸ ಹೆಮ್ಮೆಯದಾಗಿದ್ದು, ಕಿಡ್ನಿ ವೈಫಲ್ಯದಿಂದ ಬಳಲುವ ಬಡವರು ತಿಂಗಳಿಗೆ ನಾಲ್ಕೈದು ಸಲ ಡಯಾಲಿಸೆಸ್ ಮಾಡಿಸಿಕೊಳ್ಳುವುದು ಕಷ್ಟದ ಕೆಲಸ. ಅವರಿಗೆ ಜೀವ ಕೊಡುವ ನಿಟ್ಟಿನಲ್ಲಿ ಪುಣ್ಯದ ಕಾರ್ಯ ಕೈಗೊಂಡಿರುವುದು ಶ್ಲಾಘನೀಯವಾಗಿದೆ ಎಂದರು.
ಡಯಾಲಿಸೆಸ್ ಕೇಂದ್ರದ ಶರಣು ಮಳಖೇಡಕರ್ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ 5000 ರೋಗಿಗಳು ಉಚಿತ ಡಯಾಲಿಸೆಸ್ ಸೌಲಭ್ಯ ಪಡೆದಿದ್ದು, ಈಗ ಆರಂಭಿಸಲಾಗಿರುವ ಉಚಿತ ಅಂಬ್ಯುಲೆನ್ಸ್ ಸೇವೆ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕರಾಗಿರುವ ದತ್ತಾತ್ರೇಯ ಪಾಟೀಲ್ ರೇವೂರ, ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಎಚ್‌ಕೆಇ ಉಪಾಧ್ಯಕ್ಷ ಡಾ| ಶರಣಬಸಪ್ಪ ಹರವಾಳ, ಡಾ| ಶಿವಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಲಿಂ. ಚಂದ್ರಶೇಖರ ಪಾಟೀಲ ರೇವೂರ ಫೌಂಡೇಷನ್ ಅಧ್ಯಕ್ಷ ಅಧ್ಯಕ್ಷ ಅಪ್ಪು ಕಣಕಿ, ಕುಡಾ ಅಧ್ಯಕ್ಷ ದಯಾಘನ್ ಧಾರವಾಡಕರ್, ಪಾಲಿಕೆ ಸದಸ್ಯರಾದ ಪ್ರಭು ಹಾದಿಮನಿ, ವಿಜಯಕುಮಾರ ಸೇವಲಾನಿ, ವೀರಣ್ಣ ಹೊನ್ನಳ್ಳಿ, ವಿಶಾಲ ದರ್ಗಿ, ಮುಖಂಡರಾದ ರಾಜು ದೇವದುರ್ಗ, ರಾಮು ಗುಮ್ಮಟ್ಟ, ಶ್ರೀನಿವಾಸ ದೇಸಾಯಿ, ಸಂಗಮೇಶ ರಾಜೋಳೆ, ಸೂರಜ್ ತಿವಾರಿ, ಬೆಳಮಗಿ, ಶಾಂತು ದುಧನಿ, ಅಪ್ಪಾಸಾಬ ಪಾಟೀಲ ಮುಂತಾದವರಿದ್ದರು.