ಪಾಂಡವಪುರ: ಗ್ರಾನೈಟಿಕ್ ಶಿಲಾ ನಿಕ್ಷೇಪದ ಗಣಿಯಿಂದ ತುಂಬಿರುವ ತಾಲೂಕಿನ ಬೇಬಿ ಬೆಟ್ಟದಲ್ಲಿ ಗಣಿ ಸದ್ದು ಸ್ತಬ್ಧಗೊಂಡಿದೆ. ನಿಷೇಧಿತ ಸ್ಫೋಟಕಗಳನ್ನು ಬಳಸಿ ಕಲ್ಲು ಸಿಡಿಸುವ ಮೂಲಕ ಭೂಕಂಪನದ ಅನುಭವ ಸೃಷ್ಠಿಸುತ್ತಿದ್ದ ಆತಂಕ ಈಗ ದೂರವಾಗಿದೆ. ದಶಕಗಳಿಂದ ನಡೆದ ಸ್ವೇಚ್ಛಾಚಾರದ ಗಣಿ ಚಟುವಟಿಕೆಗೆ ಬೇಬಿ ಬೆಟ್ಟ ಸಂಪೂರ್ಣ ನಲುಗಿಹೋಗಿದ್ದು, ಗಣಿಗಾರಿಕೆಗೆ ಜಿಲ್ಲಾಧಿಕಾರಿ ಬರೆದ ಮರಣಶಾಸನದಿಂದ ಆ ಪ್ರದೇಶದಲ್ಲಿ ನೆಮ್ಮದಿ ನೆಲೆಸಿದೆ.
ಸರ್ಕಾರಕ್ಕೆ ಯಾವುದೇ ತೆರಿಗೆ ಪಾವತಿಸದೆ ಅಕ್ರಮವಾಗಿ ಗಣಿಗಾರಿಕೆ ನಡೆಸಿಕೊಂಡು ಬಂದ ಗಣಿ ಮಾಲೀಕರು ಇದುವರೆಗೂ ಕೋಟಿ ಕೋಟಿ ಹಣವನ್ನು ಬಾಚಿಕೊಂಡಿದ್ದಾರೆ. ಅಮೂಲ್ಯ ಗಣಿ ಸಂಪತ್ತನ್ನು ಲೂಟಿ ಹೊಡೆದಿದ್ದಾರೆ. ನಿರಂತರ ಕಲ್ಲು ಗಣಿಗಾರಿಕೆಯಿಂದ ಬೇಬಿ ಬೆಟ್ಟ ಕರಗಿರುವುದಲ್ಲದೆ, ಸುತ್ತಮುತ್ತಲ ಪರಿಸರವೂ ಹಾನಿಗೊಳಗಾಗಿದೆ.
ಕೃಷ್ಣರಾಜಸಾಗರ ಅಣೆಕಟ್ಟೆಗೆ ಗಣಿಗಾರಿಕೆಯಿಂದ ಅಪಾಯ ಎದುರಾಗುವುದನ್ನು ತಡೆಗಟ್ಟುವ ಸಲುವಾಗಿ ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಚಟುವಟಿಕೆಯನ್ನು ಸಂಪೂರ್ಣ ಬಂದ್ ಮಾಡಿ ಮೊದಲ ಬಾರಿಗೆ ಅಕ್ರಮ ಕಲ್ಲು ಗಣಿ ವಿರುದ್ಧ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸಿಡಿದೆದ್ದಿದ್ದಾರೆ. ಗಣಿ ನಿಷೇಧದ ಬೆನ್ನಲ್ಲೇ ಇನ್ನಷ್ಟು ತ್ವರಿತ ಕ್ರಮಗಳನ್ನು ಕೈಗೊಂಡು ಗಣಿಗಾರಿಕೆಗೆ ಮರಣಶಾಸನ ಬರೆಯಲು ಮುಂದಾಗಿದ್ದಾರೆ.
ಬೇಬಿ ಬೆಟ್ಟದಲ್ಲಿರುವ ಗಣಿ ಹಾಗೂ ಕ್ರಷರ್ ಕಚೇರಿಗಳಿಗೆ ನೋಟೀಸ್ ಅಂಟಿಸಲಾಗಿದ್ದು, ಜಿಲ್ಲಾಧಿಕಾರಿಗಳ ಆದೇಶದಂತೆ ಸದರಿ ಕ್ರಷರ್‌ನ್ನು ಮುಂದಿನ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಆದೇಶದವರೆಗೆ ಸ್ಥಗಿತಗೊಳಿಸಲು ಆದೇಶಿಸಲಾಗಿದೆ ಎಂದು ಬರೆದು ಸೂಚನೆ ನೀಡಲಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳೂ ಕೂಡ ದಿನದಲ್ಲಿ ಹಲವಾರು ಬಾರಿ ಬೇಬಿ ಬೆಟ್ಟಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಬೇಬಿ ಬೆಟ್ಟದಲ್ಲಿ ಕೂಲಿ ಕಾರ್ಮಿಕರು ಮಾತ್ರ ಉಳಿದುಕೊಂಡಿದ್ದು, ಯಂತ್ರಗಳೆಲ್ಲವೂ ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಗಣಿ ಧೂಳು ಎಲ್ಲಿಯೂ ಕಂಡುಬರುತ್ತಿಲ್ಲ. ರಸ್ತೆಗಳಲ್ಲಿ ಧೂಳೆಬ್ಬಿಸಿಕೊಂಡು ಸಾಗುತ್ತಿದ್ದ ವಾಹನಗಳ ಸಂಚಾರವೂ ಸ್ಥಗಿತಗೊಂಡಿದೆ. ಬೇಬಿ ಬೆಟ್ಟದ ಸುತ್ತಮುತ್ತಲ ಪ್ರದೇಶದಲ್ಲಿ ಗಣಿ ಧೂಳು ಮರೆಯಾಗಿದೆ. ಯಂತ್ರಗಳು, ವಾಹನಗಳ ಸದ್ದಿಲ್ಲದೆ ವಾತಾವರಣ ಸಂಪೂರ್ಣ ಶಾಂತವಾಗಿದೆ. ಸ್ಫೋಟದಿಂದ ಬೆಚ್ಚಿ ಬೀಳುತ್ತಿದ್ದ ಜೀವಗಳು ನೆಮ್ಮದಿ ಕಾಣುತ್ತಿವೆ. ಇದೇ ರೀತಿಯ ವಾತಾವರಣ ಸದಾಕಾಲ ನೆಲೆಸಿರಲಿ ಎಂದು ಗ್ರಾಮಸ್ಥರು ದೇವರನ್ನು ಪ್ರಾರ್ಥಿಸಿದ್ದಾರೆ.
-ಕುಮಾರಸ್ವಾಮಿ