Advertisement

ಸಾಗರ: ಬಲಾತ್ಕಾರವಾಗಿ ಖಾಸಗಿ ಜಾಗದಲ್ಲಿ ಕಲ್ಲುಕ್ವಾರೆ; ರಕ್ಷಣೆಗೆ ಮಹಿಳೆ ಮೊರೆ

03:58 PM Apr 26, 2022 | Suhan S |

ಸಾಗರ: ತ್ಯಾಗರ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತ್ಯಾಗರ್ತಿ ಗ್ರಾಮದ ಸರ್ವೆ ನಂ. 37 ರಲ್ಲಿರುವ ನಮ್ಮ ಜಾಗದಲ್ಲಿ ಬಲಾತ್ಕಾರವಾಗಿ ಕಲ್ಲುಕ್ವಾರೆ ನಡೆಸಲಾಗುತ್ತಿದೆ. ಮಾವನವರಿಗೆ ಮಂಜೂರಾದ ಭೂಮಿಯಲ್ಲಿ ಕಲ್ಲುಕ್ವಾರೆ ಜಾಗ ನನ್ನ ಗಂಡನಿಗೆ ಸೇರಿದ್ದಾಗಿದ್ದು, ಬಿಜೆಪಿ ಮುಖಂಡರೋರ್ವರು ಬಲಾತ್ಕಾರವಾಗಿ ಕಲ್ಲುಕ್ವಾರೆ ನಡೆಸಿ ನಮ್ಮನ್ನು ನಿರಾಶ್ರಿತರನ್ನಾಗಿ ಮಾಡುತ್ತಿದ್ದಾರೆ. ಇದರ ಜೊತೆಗೆ ದಿನಬೆಳಗಾದರೆ ಜೀವ ಬೆದರಿಕೆಯನ್ನು ನನಗೆ ಹಾಗೂ ನನಗೆ ಆಶ್ರಯಕೊಟ್ಟ ತಮ್ಮನಿಗೆ ಹಾಕಲಾಗುತ್ತಿದೆ ಎಂದು ಸಂತ್ರಸ್ತೆ ನೇತ್ರಾವತಿ ದೂರಿದ್ದಾರೆ.

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಆರ್ಥಿಕವಾಗಿ ತೀರ ಸಂಕಷ್ಟದಲ್ಲಿದ್ದೇವೆ. ವಾಸಕ್ಕೆ ಮನೆ ಸಹ ಇಲ್ಲ. ನಾನು ಹಾಗೂ ನನ್ನ ಇಬ್ಬರು ಮಕ್ಕಳು ವಿಷ ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ. ಕಲ್ಲುಕ್ವಾರೆ ನಿಲ್ಲಿಸಿ ಜಾಗವನ್ನು ನಮಗೆ ಕೊಡದೆ ಹೋದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಗಣಿ ಇಲಾಖೆ ಅಧಿಕಾರಿ ತಾವು ಬರುವ ಸಮಯವನ್ನು ಗಣಿಗಾರಿಕೆ ಮಾಡುವವರಿಗೆ ಮುಂಚಿತವಾಗಿ ಹೇಳುತ್ತಿರುವ ಅನುಮಾನವಿದ್ದು, ಅವರ ದಾಳಿ ಸಂದರ್ಭಕ್ಕಿಂತ ಮೊದಲು ಕಲ್ಲುಕ್ವಾರೆ ಯಂತ್ರಗಳನ್ನು ತೆಗೆದುಕೊಂಡು ಹೋಗಿರುತ್ತಾರೆ ಎಂದು ಆರೋಪಿಸಿದರು.

ನನ್ನ ಗಂಡ ಮದ್ಯವ್ಯಸನಿಯಾಗಿದ್ದು ಕುಟುಂಬ ನಿರ್ವಹಣೆ ಮಾಡುತ್ತಿಲ್ಲ. ನನ್ನ ಮೈದುನನೋರ್ವರ ಕುಮ್ಮಕ್ಕಿನಿಂದ ನಮ್ಮ ಜಾಗವನ್ನು ಅತಿಕ್ರಮಿಸುವ ಕೆಲಸ ಮಾಡಲಾಗುತ್ತಿದೆ. ಕಲ್ಲುಕ್ವಾರೆ ನಿಲ್ಲಿಸಿ ನಮ್ಮ ಜಾಗ ನಮಗೆ ಬಿಟ್ಟು ಕೊಡಿ ಎಂದು ಕೇಳಿದರೆ ನಮ್ಮನ್ನು ಬೆದರಿಸುವ, ಹಲ್ಲೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಈ ಬಗ್ಗೆ ತಹಶೀಲ್ದಾರ್ ಕಚೇರಿಗೆ, ಪೊಲೀಸ್ ಠಾಣೆಗೆ, ಗ್ರಾಮ ಪಂಚಾಯ್ತಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಲ್ಲುಕ್ವಾರೆ ನಡೆಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಸಕರಿಗೆ ಸಹ ಫೋನ್ ಮೂಲಕ ನಮ್ಮ ಸಮಸ್ಯೆ ಹೇಳಿಕೊಂಡಿದ್ದೇವೆ. ತಕ್ಷಣ ನಮ್ಮ ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುಂದಾಗಬೇಕು ಎಂದರು.

ಗೋಷ್ಠಿಯಲ್ಲಿ ಸಂಗೀತ, ಮಂಜುನಾಥ, ಸುಪ್ರಿಯ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next