Advertisement
ಈಗಾಗಲೇ ಸುಮಾರು 7-8 ಬೆಟ್ಟಗುಡ್ಡಗಳು ಗಣಿಗಾರಿಕೆಗೆ ಸಂಪೂರ್ಣವಾಗಿ ಕರಗಿ ಹೋಗಿವೆ. ಈಗ ಇರುವ ಒಂದು ಬೆಟ್ಟವನ್ನು ಕರಗಿಸಲು ಪ್ರಾಯೋಗಿಕ ಸ್ಫೋಟ ನಡೆಸಿ ಗಣಿಗಾರಿಕೆಗೆಅವಕಾಶ ನೀಡುವ ಉದ್ದೇಶದಿಂದ ಒತ್ತಡ ಹಾಕಲಾಗುತ್ತಿದೆ.ಪಾಂಡವಪುರ ಬೇಬಿಬೆಟ್ಟದ ಸರ್ವೆ ನಂ.1ರಲ್ಲಿರುವ ಅಮೃತ್ ಮಹತ್ ಕಾವಲ್‌ನ ಪ್ರದೇಶ ಬೇಬಿಬೆಟ್ಟವನ್ನು ಆವರಿಸಿಕೊಂಡಿದೆ. ಇಲ್ಲಿನ ಕಲ್ಲು ಗಟ್ಟಿ ಕಲ್ಲಾಗಿದೆ. ಅಲ್ಲದೇ, ಸಂಪೂರ್ಣ ಗ್ರಾನೈಟ್ ಕಲ್ಲಿನಿಂದ ಕೂಡಿರುವುದರಿಂದ ಇಲ್ಲಿನ ಕಲ್ಲಿಗೆ ಹೆಚ್ಚು ಬೇಡಿಕೆಯೂ ಇದೆ.
Related Articles
Advertisement
ಕೆಆರ್‌ಎಸ್ ಜಲಾಶಯ ನಿರ್ಮಾಣದ ವೇಳೆ ಕಲ್ಲು ಹುಡುಕುತ್ತಿದ್ದಾಗ ಇದೇ ಬೇಬಿಬೆಟ್ಟದಿಂದ ಕಲ್ಲು ತಂದು ಜಲಾಶಯ ನಿರ್ಮಾಣ ಮಾಡಲಾಗಿದೆ. ಒಂದೇ ಕಲ್ಲಿನ ಪದರದ ಮೇಲೆಯೇ ಜಲಾಶಯ ನಿರ್ಮಾಣ ಮಾಡಲಾಗಿದೆ. ರಾಕ್ ಫಾರ್ಮೇಷನ್ ಸಿಸ್ಟಂ ಹೊಂದಿದೆ. ಆ ಕಲ್ಲಿನ ಪದರ 100 ಕಿ.ಮೀ.ಗಿಂತ ಹೆಚ್ಚಿದೆ. ವೈಜ್ಞಾನಿಕವಾಗಿ ಬೇಬಿಬೆಟ್ಟಕ್ಕೂ ಜಲಾಶಯಕ್ಕೂ ಸಂಪರ್ಕ ಹೊಂದಿದೆ. ಬೇಬಿಬೆಟ್ಟದಲ್ಲಿ ಕಲ್ಲು ಸ್ಫೋಟಗೊಂಡರೆ ಅದರ ಕಂಪನದ ತೀವ್ರತೆ ಜಲಾಶಯದ ಮೇಲೆ ಪರಿಣಾಮ ಬೀರಲಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಕಾವೇರಿ ಜಲಾಶಯದ ತಜ್ಞ ಲಕ್ಷ್ಮಣ್ ಹೇಳುತ್ತಾರೆ.
ಹೈಕೋರ್ಟ್ ಆದೇಶ ಉಲ್ಲಂಘನೆ :
ಕರ್ನಾಟಕ ಉತ್ಛ ನ್ಯಾಯಾಲಯದ 2001ರಲ್ಲಿ ನೀಡಿರುವ ತೀರ್ಪಿನ ಅನ್ವಯ ಹಾಗೂ ನಿಯಮಾನುಸಾರ ಅಮೃತ್ ಮಹಲ್ ಕಾವಲಿನ ಜಮೀನನ್ನು ಅಮೃತಮಹಲ್ ತಳಿಯ ಜಾನುವಾರುಗಳನ್ನು ಅಭಿವೃದ್ಧಿಪಡಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಮಂಜೂರು ಮಾಡಬಾರದೆಂದು ನ್ಯಾಯಾಲಯ ತೀರ್ಪು ನೀಡಿದೆ. ಆದರೆ, ಕಲ್ಲುಗಣಿ ಲಾಬಿಗೆ ಮಣಿದ ಜಿಲ್ಲಾಡಳಿತ, ಹೈಕೋರ್ಟ್ ಆದೇಶ ಉಲ್ಲಂಘಿಸಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿರುವುದು ಕಂಡು ಬಂದಿದೆ.
ಸತ್ಯಾಗ್ರಹ ನಡೆಸಿದ್ದ ಶ್ರೀ : ಬೇಬಿಬೆಟ್ಟದಲ್ಲಿರುವ ಶ್ರೀ ರಾಮಯೋಗೀಶ್ವರ ಮಠದ ಹಿರಿಯ ಸದಾಶಿವಸ್ವಾಮೀಜಿ ಅವರು ಬೇಬಿಬೆಟ್ಟದ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದರು. ಮಠ ಇರುವ ಜಾಗ ಬಿಟ್ಟು ಉಳಿದ ಸುತ್ತಮುತ್ತ ಸಂಪೂರ್ಣ ಬೆಟ್ಟವನ್ನುಗಣಿಗಾರಿಕೆಯಿಂದ ಕರಗಿಸಲಾಗಿತ್ತು.ಕಲ್ಲು ಸ್ಫೋಟದಿಂದ ಮಠದ ಗೋಡೆಗಳು ಬಿರುಕು ಬಿಟ್ಟಿದ್ದವು.ಇದರಿಂದ ಸ್ವಾಮೀಜಿ ಉಪವಾಸಸತ್ಯಾಗ್ರಹವನ್ನೂ ನಡೆಸಿದ್ದರು. ಆದರೆ, ಕಳೆದ 2 ವರ್ಷಗಳ ಹಿಂದೆ ನಿಧನರಾದರು.
ಕೇಂದ್ರದ ಅನುಮತಿ ಪಡೆಯುವಂತೆ ವರದಿ :
2010ರಲ್ಲಿ ಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡುವ ಹಿನ್ನೆಲೆ ಜಿಲ್ಲಾಧಿ ಕಾರಿ ಅರಣ್ಯ ಇಲಾಖೆಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಈ ಹಿನ್ನೆಲೆ ಉಪ ಅರಣ್ಯ ಸಂರಕ್ಷಣಾಧಿ ಕಾರಿಗಳು ಬೇಬಿಬೆಟ್ಟದ ಕಾವಲು, ಕಾಮನಾಯ್ಕನಹಳ್ಳಿ ಹಾಗೂ ಇತರೆ ಗ್ರಾಮಗಳ ಅಗತ್ಯ ಮಾಹಿತಿಯಂತೆ ಉಪ ವಿಭಾಗಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಬೇಬಿಬೆಟ್ಟದ ಗ್ರಾಮದ ಸರ್ವೆ ನಂಬರ್ 1ರಲ್ಲಿ ಆರ್‌ಟಿಸಿ ಪರಿಶೀಲಿಸಿದಾಗ, ಅಮೃತ ಮಹಲ್ ಕಾವಲ್ ಎಂಬುದಾಗಿರುವುದರಿಂದ ಅರಣ್ಯೇತರ ಚಟುವಟಿಕೆ ನಡೆಸಲು ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಕೇಂದ್ರದ ಅನುಮತಿ ಪಡೆಯಬೇಕಾಗಿದೆ. ಅಲ್ಲದೆ, ಪ್ರಸ್ತುತ ಪ್ರದೇಶದಲ್ಲಿ ಸುಮಾರು 96ರಷ್ಟು ಕಲ್ಲುಗಣಿಗಳು ನಡೆಯುತ್ತಿವೆ ಎಂದು 2010ರ ಫೆಬ್ರವರಿಯಲ್ಲಿ ವರದಿ ನೀಡಿದ್ದಾರೆ.
ಬೇಬಿಬೆಟ್ಟದ ಸರ್ವೆ ನಂಬರ್ 1 ಅಮೃತ ಮಹಲ್ ಕಾವಲ್ ಎಂದು ದಾಖಲಾಗಿದೆ. ಅಲ್ಲದೆ, ತಹಶೀಲ್ದಾರ್ ಕೂಡ ಆಕಾರ್ ಬಂದ್‌ನಲ್ಲಿ ಬಿ ಖರಾಬು ಎಂದು ನಮೂದಿಸಲಾಗಿದೆ. ಬಿ ಖರಾಬು ಜಮೀನನ್ನು ಗಣಿಗಾರಿಕೆಗೆ ನೀಡಲು ಬರಲ್ಲ. ಅಲ್ಲದೇ, ಹೈಕೋರ್ಟ್ ನ ಆದೇಶ ಉಲ್ಲಂಘಿಸಿ ಇಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಇದರಿಂದ ಜಲಾಶಯಕ್ಕೆ ತೊಂದರೆಯಾಗಲಿದೆ. – ರವೀಂದ್ರ, ಆರ್‌ಟಿಐ ಕಾರ್ಯಕರ್ತ
– ಎಚ್.ಶಿವರಾಜು