Advertisement

ಗಣಿಗಾರಿಕೆ; ಕೇಂದ್ರ ತನಿಖಾ ತಂಡದ ಭೇಟಿಗೆ ಆಗ್ರಹ

10:39 AM May 22, 2019 | Suhan S |

ಸಾಗರ: ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಅಕ್ರಮ ಗಣಿಗಾರಿಕೆ ಇದೆ. ಅರಣ್ಯ ನಾಶ ವ್ಯಾಪಕವಾಗಿದೆ. ಅರಣ್ಯ ಭೂಮಿ ಕಬಳಿಕೆ ಕೂಡ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ತಡೆ ನೀಡಬೇಕಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ತನಿಖಾ ತಂಡ ಘಟ್ಟ ಪ್ರದೇಶಕ್ಕೆ ಭೇಟಿ ನೀಡಬೇಕು ಎಂದು ಕೇಂದ್ರ ಪರಿಸರ ಅರಣ್ಯ ಮಂತ್ರಾಲಯದ ಹೆಚ್ಚುವರಿ ನಿರ್ದೇಶಕ ಕೆ.ಪಿ. ಸಿಂಗ್‌ ಅವರನ್ನು ವೃಕ್ಷಲಕ್ಷ ಆಂದೋಲನದ ನಿಯೋಗ ಆಗ್ರಹಿಸಿದೆ.

Advertisement

ಬೆಂಗಳೂರಿನ ಕೋರಮಂಗಲದ ಕೇಂದ್ರ ಅರಣ್ಯ ಮಂತ್ರಾಲಯದ ದಕ್ಷಿಣ ಭಾರತ ಕಚೇರಿಗೆ ಭೇಟಿ ನೀಡಿದ ವೃಕ್ಷಲಕ್ಷ ಆಂದೋಲನದ ನಿಯೋಗ ಪಶ್ಚಿಮಘಟ್ಟದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಕೇಂದ್ರ ಅರಣ್ಯ ಮಂತ್ರಾಲಯದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ಕರಾವಳಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ಆಗುತ್ತಿರುವ ಪರಿಸರ ಅವಘಡಗಳನ್ನು ತಪ್ಪಿಸಬೇಕು. ಎಂಪಿಎಂ ಕಾರ್ಖಾನೆ ಬಂದ್‌ ಆಗಿರುವ ಹಿನ್ನೆಲೆಯಲ್ಲಿ ಈ ಹಿಂದೆ ಈ ಭಾಗದಲ್ಲಿ ನೀಡಲಾಗಿದ್ದ 70 ಸಾವಿರ ಎಕರೆ ಪಶ್ಚಿಮ ಘಟ್ಟದ ಅರಣ್ಯ ಭೂಮಿಯನ್ನು ಎಂಪಿಎಂ ಕಾರ್ಖಾನೆಯಿಂದ ರಾಜ್ಯ ಅರಣ್ಯ ಇಲಾಖೆ ವಾಪಸ್‌ ಪಡೆಯಬೇಕು. 3 ವರ್ಷಗಳಿಂದ ನಾವು ಈ ಸಂಬಂಧ ಆಗ್ರಹ ಮಾಡುತ್ತಿದ್ದೇವಾದರೂ ಇನ್ನೂ ಕ್ರಮಕ್ಕೆ ಮುಂದಾಗಿಲ್ಲ ಎಂದು ನಿಯೋಗ ಕೇಂದ್ರ ಸರ್ಕಾರಕ್ಕೆ ದೂರು ನೀಡಿದೆ.

ಪಶ್ಚಿಮ ಘಟ್ಟದ ಡೀಮ್ಡ್ ಅರಣ್ಯಗಳ ನಾಶ, ಭೂಕಬಳಿಕೆ ವ್ಯಾಪಕವಾಗಿದೆ. ಸಾವಿರಾರು ಎಕರೆ ಡೀಮ್ಡ್ ಅರಣ್ಯಗಳ ನಾಶ ತಡೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. 3 ಲಕ್ಷ ಎಕರೆ ಡೀಮ್ಡ್ ಅರಣ್ಯ ರಕ್ಷಣೆಗೆ ಕೇಂದ್ರ ಸರ್ಕಾರ ತುರ್ತು ಕ್ರಮಕ್ಕೆ ಮುಂದಾಗಬೇಕು. ಈ ಭಾಗದ ಡೀಮ್ಡ್ ಅರಣ್ಯದಲ್ಲಿ ಗಣಿಗಾರಿಕೆಗೆ ರಾಜ್ಯ ಸರ್ಕಾರ ಪರವಾನಗಿ ನೀಡಿರುವುದನ್ನು ರದ್ದು ಪಡಿಸಬೇಕು. ಮಿರಿಸ್ಟಿಕಾ ಸ್ವಾಂಪ್ಸ್‌ ಸೇರಿದಂತೆ ವಿನಾಶದ ಅಂಚಿನ ರಾಂಪತ್ರೆ ಜಡ್ಡಿಗಳು ದೇವರ ಕಾಡುಗಳು ಪಶ್ಚಿಮ ಘಟ್ಟದಲ್ಲಿ ನಾಶವಾಗುತ್ತಿದೆ. ಇವುಗಳ ರಕ್ಷಣೆಗೆ ನೇರ ಕ್ರಮ ಬೇಕು ಎಂದು ಒತ್ತಾಯಿಸಲಾಗಿದೆ.

ಜಂಟಿ ಅರಣ್ಯ ನಿರ್ವಹಣಾ ಯೋಜನೆ ಹೆಸರಿಗೆ ಮಾತ್ರವಿದೆ. ಗ್ರಾಮ ಅರಣ್ಯ ಸಮಿತಿಗಳನ್ನು ಬಲಪಡಿಸಲು ಕೇಂದ್ರ ರಾಜ್ಯಕ್ಕೆ ಸೂಚನೆ ನೀಡಬೇಕು. ಪಶ್ಚಿಮ ಘಟ್ಟದ ವಿನಾಶದ ಅಂಚಿನ ಔಷಧ ಸಸ್ಯ ಸಂಕುಲಗಳು ಸಂಪೂರ್ಣ ಕಾಣೆ ಆಗುವುದಕ್ಕಿಂತ ಮೊದಲು ಸರ್ಕಾರ ಸಂರಕ್ಷಣೆಗೆ ಕಠಿಣ ಕ್ರಮಗಳಿಗೆ ಮುಂದಾಗಬೇಕು. ಪಶ್ಚಿಮಘಟ್ಟದಲ್ಲಿ ಅಕೇಶಿಯಾ ನಿಷೇಧ ಮಾಡಿದ್ದರೂ ರಾಜ್ಯ ಅರಣ್ಯ ಇಲಾಖೆ ಇನ್ನೂ ಅಕೇಶಿಯಾ ಬೆಳೆಸುತ್ತಿದೆ, ನೆಡುತ್ತಿದೆ. ಇದನ್ನು ತಡೆಯಬೇಕು. ಏಕಜಾತಿ ನೆಡುತೋಪು ಬೆಳೆಸುವ ಪದ್ಧತಿ ಕೈ ಬಿಡಬೇಕು. ಸ್ಥಳೀಯ ಜಾತಿಯ ಗಿಡಗಳನ್ನು ಬೆಳೆಸುವಂತೆ ಸೂಚನೆ ನೀಡಬೇಕು. ಶರಾವತಿ ಕಣಿವೆಯಲ್ಲಿ ಒಂದು ಸಾವಿರ ಎಕರೆ ಅರಣ್ಯ ನಾಶ ಮಾಡಲಿರುವ ಹೊಸ ಜಲವಿದ್ಯುತ್‌ ಯೋಜನೆಗೆ ಅವಕಾಶ ನೀಡಬಾರದು ಎಂದು ನಿಯೋಗ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ನಿಯೋಗದ ನೇತೃತ್ವವನ್ನು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ವಹಿಸಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ| ವಾಮನ್‌ ಆಚಾರ್ಯ, ಡೆಪ್ಯುಟಿ ಇನ್‌ಸ್ಪೆಕ್ಟರ್‌ ಜನರಲ್ ಆಫ್‌ ಫಾರೆಸ್ಟ್‌ ಡಾ| ಅವಿನಾಶ್‌ ಕಾನ್ಪಡೆ, ಮಹೇಶಕುಮಾರ್‌ ಇತರರು ಇದ್ದರು. ಪಶ್ಚಿಮಘಟ್ಟ ಕುರಿತ ಕೆಲ ಮಹತ್ವದ ಅಧ್ಯಯನಗಳ ವರದಿಗಳನ್ನು ಅರಣ್ಯ ಮಂತ್ರಾಲಯಕ್ಕೆ ವೃಕ್ಷಲಕ್ಷ ಆಂದೋಲನದ ನಿಯೋಗ ನೀಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next