ಮಂಡ್ಯ: ಕನ್ನಂಬಾಡಿ ಅಣೆಕಟ್ಟೆಗೆ ಗಂಡಾಂತರ ಸಾಧ್ಯತೆ ಹಿನ್ನಲೆಯಲ್ಲಿ ಕೆಆರ್‌ಎಸ್ ಸುತ್ತಮುತ್ತಲ 20 ಕಿ.ಮೀ. ವ್ಯಾಪ್ತಿಯಲ್ಲಿ ಅನಿರ್ಧಿಷ್ಟಾವಧಿ ಗಣಿಗಾರಿಕೆಗೆ ನಿಷೇಧಾಜ್ಞೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.
ಬೇಬಿಬೆಟ್ಟದ ಸುತ್ತಮುತ್ತ ಹತ್ತಾರು ವರ್ಷಗಳಿಂದ ನಡೆಯುತ್ತಿರುವ ಗಣಿಗಾರಿಕೆ ನಡೆಯುತ್ತಿದ್ದು, ಇತ್ತೀಚೆಗೆ ಕಲ್ಲು ಸಿಡಿಸಲು ಭಾರೀ ಪ್ರಮಾಣದ ಸ್ಫೋಟಗಳನ್ನು ಗಣಿ ಮಾಲೀಕರು ಬಳಕೆ ಮಾಡುತ್ತಿದ್ದಾರೆನ್ನಲಾಗಿದೆ. ಸ್ಫೋಟಕ ಬಳಕೆಯಿಂದಾಗಿ ಜಲಾಶಯಕ್ಕೆ ಅಪಾಯದ ಭೀತಿ ಎದುರಾಗಿದೆ.
ಅನಿರ್ಧಿಷ್ಟಾವಧಿ ನಿಷೇದಾಜ್ಞೆ: ಜೊತೆಗೆ ಅಣೆಕಟ್ಟೆ ವ್ಯಾಪ್ತಿಯಲ್ಲಿ ಆಗಿಂದಾಗ್ಗೆ ಭಾರೀ ಪ್ರಮಾಣದ ಸರಣಿ ಶಬ್ಧ ಕೇಳಿಬರುತ್ತಿತ್ತು. ಆ.2ನೇ ವಾರದಲ್ಲೂ ಸರಣಿ ಶಬ್ಧಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸೆ.4ರವರೆಗೆ ಕಲ್ಲು ಗಣಿ ಚಟುವಟಿಕೆ ನಿರ್ಬಂಧಿಸಿ, ನಿಷೇದಾಜ್ಞೆ ಜಾರಿ ಮಾಡಿದ್ದ ಜಿಲ್ಲಾಡಳಿತ ಇದೀಗ ಅನಿರ್ಧಿಷ್ಟಾವಧಿ ನಿಷೇದಾಜ್ಞೆ ವಿಸ್ತರಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಜಲಾಶಯದ ಸುರಕ್ಷತಾ ದೃಷ್ಟಿಯಿಂದ ಆ.28ರಿಂದ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಭಾರೀ ಪ್ರಮಾಣದ ಶಬ್ಧ: ಪಾಂಡವಪುರ ತಾಲೂಕಿನ ಬೇಬಿಬೆಟ್ಟ, ಚಿನಕುರಳಿ, ಹೊನಗಾನಹಳ್ಳಿ, ದೊಡ್ಡಭೋಗನಹಳ್ಳಿ, ಮೊಳೆಸಂದ್ರ, ಅಲ್ಪಳ್ಳಿ, ಕಟ್ಟೇರಿ, ಕಣಿವೆಕೊಪ್ಪಲು, ಚಂದ್ರೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಕೃಷ್ಣರಾಜಸಾಗರ ಅಣೆಕಟ್ಟೆ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಶಬ್ಧ ಕೇಳಿಬಂದಿತ್ತು. ಈ ಶಬ್ಧ ಗಣಿಗಾರಿಕೆಯಿಂದಲೇ ಬಂದಿರಬಹುದು ಎಂದು ಹಿರಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆ, ತಹಶೀಲ್ದಾರ್ ಹೇಳಿದ್ದರು. ಮುಖ್ಯಮಂತ್ರಿಗಳು ಸಹ ಜಲಾಶಯಕ್ಕೆ ಯಾವುದೇ ಅಪಾಯ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೆ.4ರವರೆಗೆ ಇದ್ದ ನಿಷೇದಾಜ್ಞೆಯನ್ನು ಅನಿರ್ಧಿಷ್ಟಾವಧಿಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಗಣಿಗಾರಿಕೆಯಿಂದ ಅಣೆಕಟ್ಟೆಗೆ ತೊಂದರೆಯಾಗಬಹುದು ಕುರಿತಂತೆ ತಜ್ಞರಿಂದ ವರದಿ ಬಂದ ನಂತರ ಶಾಶ್ವತವಾಗಿ ಗಣಿಗಾರಿಕೆ ನಿಷೇಧಿಸಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.