Advertisement

ಖಾಸಗಿ ಆಸ್ಪತ್ರೆ ದಾದಿಯರಿಗೂ ಕನಿಷ್ಠ ವೇತನಕ್ಕೆ ಕ್ರಮ: ಯಡಿಯೂರಪ್ಪ

09:54 AM Dec 13, 2019 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದ ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಮ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಾದಿಯರಿಗೂ ಕನಿಷ್ಠ ವೇತನ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಆಂಗ್ಲೋ ಇಂಡಿಯನ್‌ ಯೂನಿಟಿ ಸೆಂಟರ್‌ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿಯಾಗಿ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ “19ನೇ ವರ್ಷದ ಫ್ಲಾರೆನ್ಸ್‌ ನೈಟಿಂಗೇಲ್‌ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳ ಮಾದರಿಯಲ್ಲೇ ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಮ್‌ಗಳ ದಾದಿಯರಿಗೂ ಕನಿಷ್ಠ ವೇತನ ನಿಗದಿಪಡಿಸಿ ಅನುಷ್ಠಾನಗೊಳಿಸಬೇಕೆಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ನೀಡಿರುವ ನಿರ್ದೇಶನದನ್ವಯ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

2000 ದಾದಿಯರ ನೇಮಕ
ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ರಾಜ್ಯ ಸರ್ಕಾರಿ ಆಸ್ಪತ್ರೆಗಳಿಗೆ ಶೀಘ್ರದಲ್ಲೇ 2000 ದಾದಿಯರನ್ನು ನೇಮಕ ಮಾಡಿಕೊಳ್ಳಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಮೆರಿಟ್‌ ಆಧರಿಸಿ 2000 ದಾದಿಯರನ್ನು ಸಂದರ್ಶನವಿಲ್ಲದೆ ನೇಮಕ ಮಾಡಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧತೆ ನಡೆಸಿದೆ. ಶೀಘ್ರದಲ್ಲೇ ಈ ಸಂಬಂಧ ಅಧಿಸೂಚನೆ ಹೊರಬೀಳಲಿದೆ. ಹಾಗೆಯೇ ರಾಜ್ಯದ ಎಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ನರ್ಸಿಂಗ್‌ ಕಾಲೇಜು ಪ್ರಾರಂಭಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎಂದು ಹೇಳಿದರು.

ನಗದು ಪುರಸ್ಕಾರ ಮೊತ್ತ ಹೆಚ್ಚಳ
ನಿಸ್ವಾರ್ಥ ಸೇವೆ ಸಲ್ಲಿಸಿದ 12 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ನಡುವೆ ಆಯೋಜಕರು, ಫ್ಲಾರೆನ್ಸ್‌ ನೈಟಿಂಗೇಲ್‌ ಪ್ರಶಸ್ತಿ ಪುರಸ್ಕೃತರಿಗೆ ಸದ್ಯ 5000 ರೂ. ನಗದು ಪುರಸ್ಕಾರ ನೀಡಲಾಗುತ್ತಿದ್ದು, ಅದನ್ನು 25,000 ರೂ.ಗೆ ಏರಿಕೆ ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಈ ವರ್ಷದಿಂದಲೇ ಎಲ್ಲ 12 ಮಂದಿ ಪುರಸ್ಕೃತರಿಗೂ ಸರ್ಕಾರದಿಂದ ತಲಾ 25,000 ರೂ. ನಗದು ಪುರಸ್ಕಾರ ನೀಡಲಾಗುವುದು. ಪುರಸ್ಕೃತರ ವಿಳಾಸ ಪಡೆದು ಅವರ ಮನೆಗಳಿಗೆ ಚೆಕ್‌ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಪ್ರಶಸ್ತಿ ಪ್ರದಾನ ಸಮಿತಿ ಅಧ್ಯಕ್ಷ ಐವಾನ್‌ ನಿಗ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next