Advertisement

ಪರಿಸರ ಸೂಕ್ಷ್ಮವಲಯ ಕನಿಷ್ಠ ಮಿತಿಗೆ ಜಿ.ಪಂ. ನಿರ್ಣಯ

11:16 PM Jan 28, 2020 | Team Udayavani |

ಉಡುಪಿ: ಚಿಕ್ಕಪುಟ್ಟ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ, ಡೀಮ್ಡ್ ಅರಣ್ಯ ಪ್ರದೇಶದಿಂದ ಆಂಶಿಕ ಡೀಮ್ಡ್ ಅರಣ್ಯ ಪ್ರದೇಶವನ್ನು ಬೇರ್ಪಡಿಸಿ ಕಲ್ಲು ಕೋರೆ ನಡೆಸಲು ಆಕ್ಷೇಪ, ಜಿ.ಪಂ. ಸಾಮಾನ್ಯ ಸಭೆಗೆ ಗೈರು ಇತ್ಯಾದಿ ಆರೋಪಗಳಿಂದಾಗಿ ಕುಂದಾಪುರ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್ಒ) ವಿರುದ್ಧ ಮಂಗಳವಾರ ಜಿ.ಪಂ. ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಜಿ.ಪಂ. ಸಾಮಾನ್ಯ ಸಭೆ ನಿರ್ಣಯ ಕೈಗೊಳ್ಳಲಾಗಿದೆ.

Advertisement

ರಾಜ್ಯ ಮಟ್ಟದಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಸಭೆ ನಡೆಸಿ ತಳೆದ ನಿರ್ಣಯಕ್ಕೆ ಜಿಲ್ಲಾ ಮಟ್ಟದ ಅರಣ್ಯ ಅಧಿಕಾರಿಗಳು ಒಪ್ಪುತ್ತಿಲ್ಲವೆಂದರೆ ಏನರ್ಥ? ಎರಡು ವರ್ಷ ಮರಳು ಸಮಸ್ಯೆಯಾಯಿತು. ಹೀಗೆ ಸುಮ್ಮನೆ ಕುಳಿತರೆ ಮುಂದೆ ಜಲ್ಲಿ ಸಮಸ್ಯೆ ತಲೆದೋರುತ್ತದೆ. ಇದು ಅಭಿವೃದ್ಧಿಗೆ ದೊಡ್ಡ ಹೊಡೆತ ಆಗಲಿದೆ ಎಂದು ಶಾಸಕ ಕೆ.ರಘುಪತಿ ಭಟ್‌ ಕಳವಳ ವ್ಯಕ್ತಪಡಿಸಿದರು.

ಡೀಮ್ಡ್ ಅರಣ್ಯ ಪ್ರದೇಶದ ನಡುವೆ ಇರುವ ಕಲ್ಲು ಕೋರೆಯಲ್ಲಿ ಕ್ರಶರ್‌ ಉತ್ಪಾದಿಸಲು ಅರಣ್ಯ ಇಲಾಖೆಯವರು ಒಪ್ಪಿಗೆ ನೀಡುತ್ತಿಲ್ಲ. ಕಲ್ಲು ಬಂಡೆಗಳಲ್ಲಿ ಗಿಡಮರ ಇರುತ್ತದೋ? ಡೀಮ್ಡ್ ಪ್ರದೇಶದಲ್ಲಿರುವ ಆಂಶಿಕ ಡೀಮ್ಡ್ ಪ್ರದೇಶವನ್ನು ಪ್ರತ್ಯೇಕಗೊಳಿಸಿ ಅನುಮತಿ ನೀಡಲು ರಾಜ್ಯ ಮಟ್ಟದ ಅಧಿಕಾರಿಗಳ ಸಭೆ ಒಪ್ಪಿಗೆ ನೀಡಿದೆ. ಉಳಿದ ಎರಡು ಇಲಾಖೆಗಳ ಅಧಿಕಾರಿಗಳು ಸರ್ವೆ ಮಾಡಿಕೊಟ್ಟರೂ ಜಿಲ್ಲಾ ಮಟ್ಟದ ಡಿಎಫ್ಒ ಸಹಿ ಮಾಡುತ್ತಿಲ್ಲ ಎಂದು ಭಟ್‌ ತಿಳಿಸಿದರು.

ಒಟ್ಟು 17 ಕ್ರಶರ್‌ಗಳಲ್ಲಿ ಮೂರಕ್ಕೆ ಒಪ್ಪಿಗೆ ದೊರಕಿದೆ. ಉಳಿದ 14ಕ್ಕೆ ಅನುಮತಿ ದೊರಕಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಜಿ.ಪಂ. ಸಭೆಗೆ ಆರಂಭದಿಂದಲೂ ಡಿಎಫ್ಒ ಬಂದಿಲ್ಲ. ಒಂದು ಅಕೇಶಿಯಾ ಗಿಡ ಕಡಿಯಲೂ ಅನುಮತಿ ಸಿಗುತ್ತಿಲ್ಲ ಎಂದು ಜನಾರ್ದನ ತೋನ್ಸೆ, ಪ್ರತಾಪ್‌ ಹೆಗ್ಡೆ ಹೇಳಿದರು. ಡಿಎಫ್ಒ ಅವರಿಗೆ ಗೇರು ಅಭಿವೃದ್ಧಿ ನಿಗಮದ ಪ್ರಭಾರ ಅಧಿಕಾರವೂ ಇರುವುದರಿಂದ ಅಲ್ಲಿಗೆ ಹೋಗಿದ್ದಾರೆಂದು ಸಿಇಒ ತಿಳಿಸಿದಾಗ, ಅದು ಹೆಚ್ಚುವರಿ ಪ್ರಭಾರ. ಅವರಿಗೆ ಡಿಎಫ್ಒ ಹುದ್ದೆ ಮುಖ್ಯ ಎಂದು ಭಟ್‌ ತಿಳಿಸಿದರು.

ಜಿ.ಪಂ. ಸಾಮಾನ್ಯ ಸಭೆಗೆ ಡಿಎಫ್ಒ ಬಂದು ಸ್ಪಷ್ಟನೆ ಕೊಡಬೇಕಿತ್ತು. ಇಲ್ಲವಾದರೆ ಗೈರು ಹಾಜರಿಗೆ ಅಧ್ಯಕ್ಷರು, ಸಿಇಒ ಅವರ ಅನುಮತಿ ಪಡೆಯಬೇಕಿತ್ತು. ಸರ್ವಪಕ್ಷಗಳ ನಿಯೋಗ ಮುಖ್ಯ ಕಾರ್ಯದರ್ಶಿಯವರಿಗೆ ದೂರು ಕೊಡೋಣ ಎಂದು ಭಟ್‌ ತಿಳಿಸಿದರು. ಅದರಂತೆ ಡಿಎಫ್ಒ ವಿರುದ್ಧ ಜಿ.ಪಂ. ಸಭೆ ನಿರ್ಣಯ ತಳೆಯಿತು.

Advertisement

ಅಭಯಾರಣ್ಯದ ಗಡಿಗೆ ಹೊಂದಿಕೊಂಡು ಒಂದು ಕಿ.ಮೀ. ಪ್ರದೇಶವನ್ನು ಗುರುತಿಸಿದ್ದಾರೆ. ಈ ಹಿಂದೆ 200 ಮೀ. ಇರಬೇಕೆಂದು ನಾವು ನಿರ್ಣಯ ಮಂಡಿಸಿದ್ದೆವು. ಈಗ ಕನಿಷ್ಠ ಮೀ. ಬಿಡಬೇಕೆಂದು ನಿರ್ಣಯ ತಳೆಯೋಣ ಎಂದು ಬಾಬು ಶೆಟ್ಟಿ ಸಲಹೆ ನೀಡಿದಂತೆ ನಿರ್ಣಯ ತಳೆಯಲಾಯಿತು.

ಸ್ಥಾಯೀ ಸಮಿತಿ ಅಧ್ಯಕ್ಷರಾದ ಸುಮಿತ್‌ ಶೆಟ್ಟಿ, ಶೋಭಾ ಪುತ್ರನ್‌, ಲಕ್ಷ್ಮೀ ಮಂಜು ಬಿಲ್ಲವ, ಬಟವಾಡೆ ಸುರೇಶ್‌, ಗೌರಿ ದೇವಾಡಿಗ ಚರ್ಚೆ ಯಲ್ಲಿ ಪಾಲ್ಗೊಂಡರು. ಮುಖ್ಯ ಯೋಜನಾ ಧಿಕಾರಿ ಶ್ರೀನಿವಾಸ ರಾವ್‌ ಸ್ವಾಗತಿಸಿದರು. ಉಪಕಾರ್ಯದರ್ಶಿ ಕಿರಣ್‌ ಪಡೆ°àಕರ್‌, ಯೋಜನ ನಿರ್ದೇಶಕ ಗುರುದತ್‌ ಉಪಸ್ಥಿತರಿದ್ದರು.

ಅಕೇಶಿಯಾ ಬೆಳೆಸುವ ಅರಣ್ಯ ಇಲಾಖೆ
ನಿಜವಾದ ಕಾಡು ಪ್ರದೇಶದಲ್ಲಿ ಕಾಡು ಬೆಳೆಸದ ಅರಣ್ಯಾಧಿಕಾರಿಗಳು ಅಕೇಶಿಯಾ ಗಿಡ ನೆಟ್ಟು ಕಾಡು ಪ್ರಾಣಿಗಳು ನಾಡಿಗೆ ಬರುವಂತೆ ಮಾಡಿದ್ದಾರೆ ಎಂದು ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಪ್ರತಾಪ್‌ ಹೆಗ್ಡೆ ಮಾರಾಳಿ ಹೇಳಿದರೆ, ಕರ್ಜೆಯಲ್ಲಿ ಪರಿಶಿಷ್ಟ ಪಂಗಡದವರ ಪ್ರದೇಶಕ್ಕೆ ರಸ್ತೆ ನಿರ್ಮಿಸಲು ಅನುದಾನ ತಂದರೆ ಒಂದೇ ಒಂದು ಎಲೆ ಕಡಿಯುವ ಅಗತ್ಯವಿಲ್ಲದಿದ್ದರೂ ಅರಣ್ಯ ಇಲಾಖೆಯವರು ಕಾಮಗಾರಿಗೆ ತಡೆಯೊಡ್ಡುತ್ತಾರೆ. ಇದು ಹೊಸ ರಸ್ತೆಯಲ್ಲ, ಹಳೆಯ ಡಾಮರು ರಸ್ತೆಗೆ ಮರು ಡಾಮರು ಕಾಮಗಾರಿ ನಡೆಸುವುದು. ಹೀಗೆ ಮಾಡಿದರೆ ಅರಣ್ಯ ಇಲಾಖೆ ವಿರುದ್ಧ ದಂಗೆ ಏಳಬೇಕಾಗುತ್ತದೆ ಎಂದು ಭಟ್‌ ಎಚ್ಚರಿಸಿದರು. ಹಣ ಖರ್ಚಾಗುತ್ತದೆ ವಿನಾ ಗಿಡಗಳನ್ನು ಕೊಡುವುದಿಲ್ಲ ಎಂದು ಶಿಲ್ಪಾ ಸುವರ್ಣ ಹೇಳಿದರು.

ಪರಿಸರ ಸೂಕ್ಷ್ಮ ವಲಯ
ಕುಂದಾಪುರ, ಬೈಂದೂರು ತಾಲೂಕಿನ ಆಜ್ರಿ, ಸಿದ್ಧಾಪುರ, ಉಳೂ¤ರು ಮೊದಲಾದೆಡೆ ಅತಿಸೂಕ್ಷ್ಮ ಪ್ರದೇಶ ಎಂದು ಘೋಷಣೆಯಾಗಿದೆ. ಇಲ್ಲಿ ಶೇ.80 ಜನರು ಕೃಷಿಕರಾಗಿದ್ದಾರೆ. ಇಲ್ಲಿ ಇನ್ನು ಯಾವುದೇ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸುವಂತಿಲ್ಲ. ನಾಲ್ಕು ದನಗಳಿಗಿಂತ ಹೆಚ್ಚಿಗೆ ಸಾಕುವಂತಿಲ್ಲ ಎಂದು ರೋಹಿತ್‌ಕುಮಾರ್‌ ಶೆಟ್ಟಿ ಸಭೆಯ ಗಮನಕ್ಕೆ ತಂದರು. ಪರಿಸರ ಸೂಕ್ಷ್ಮ ವಲಯ ಬೇರೆ, ಕಸ್ತೂರಿ ರಂಗನ್‌ ವರದಿ ಬೇರೆ. ಪರಿಸರ ಸೂಕ್ಷ್ಮ ವಲಯ ಕೇವಲ ಮೂಕಾಂಬಿಕಾ ಅರಣ್ಯ ಪ್ರದೇಶಕ್ಕೆ ಮಾತ್ರ ಘೋಷಣೆಯಾಗಿದೆ. ಸೋಮೇಶ್ವರ ಅಭಯಾರಣ್ಯ, ಕುದುರೆಮುಖ ಅಭಯಾರಣ್ಯ ಪ್ರದೇಶಕ್ಕೆ ಇನ್ನೂ ಘೋಷಣೆಯಾಗಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next