ಶಿವಮೊಗ್ಗ: ಮಳೆ ಇಲ್ಲ ಎಂದು ಕಂಗೆಟ್ಟಿದ್ದ ಶಿವಮೊಗ್ಗ ಜನ ಮಂಗಳವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಸಂತಸಗೊಂಡರು. ಒಂದು ಕಡೆ ಸಂತಸವಾದರೆ ಇನ್ನೊಂದು ಕಡೆ ಸಮಸ್ಯೆ ಕೂಡ ತಂದಿದೆ.
ಅರ್ಧ ಗಂಟೆಯಿಂದ ಸುರಿಯುತ್ತಿರುವ ಮಳೆಗೆ ಕೆ.ಆರ್.ಪುರಂ, ಗಾಂಧಿನಗರ ಸೇರಿ ಹಲವು ಬಡಾವಣೆಗಳಲ್ಲಿ ಅಂಗಡಿ, ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.
ಮೊದಲ ಮಳೆಯಾದ್ದರಿಂದ ಕಸ, ಕಡ್ಡಿಯಿಂದ ಚರಂಡಿಗಳು ಬ್ಲಾಕ್ ಆಗಿರುವುದು ಅಲ್ಲಲ್ಲಿ ಕಂಡುಬಂತು. ಇದರಿಂದ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ.
ಗ್ರಾಮೀಣ ಭಾಗದಲ್ಲಿ ಮಳೆಯಿಂದ ಹರ್ಷಚಿತ್ತರಾಗಿದ್ದಾರೆ. ಎರಡು ದಿನ ಇದೆ ರೀತಿ ಮಳೆಯಾದರೆ ಬಿತ್ತನೆಗೆ ಅನುಕೂಲವಾಗಲಿದೆ.
ಇದೇ ವೇಳೆ ಮೊದಲ ಮಳೆಗೆ ಶಿವಮೊಗ್ಗ ರೈಲ್ವೆ ನಿಲ್ದಾಣ ಅವ್ಯವಸ್ಥೆ ಬಯಲಾಗಿದ್ದು, ನಿಲ್ದಾಣದ ಪ್ರಯಾಣಿಕರು ಕುಳಿತುಕೊಳ್ಳುವ ಜಾಗದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸೋರುತ್ತಿದೆ. ನೀರು ಧಾರಾಕಾರ ಹರಿಯುತ್ತಿದ್ದು, ದುರಸ್ತಿ ಮಾಡದೆ ಹೋದರೆ ಮಳೆಗಾಲದಲ್ಲಿ ಪ್ರಯಾಣಿಕರು ಕಷ್ಟಪಡಬೇಕಾದ ಪರಿಸ್ಥಿತಿಯಿದೆ.