Advertisement

ಉದ್ಘಾಟನೆಗೆ ಸೀಮಿತವಾದ ಮಿನಿ ವಿಧಾನಸೌಧ

05:08 PM Mar 07, 2020 | Suhan S |

ಚಿಕ್ಕಬಳ್ಳಾಪುರ: ಬಹಳಷ್ಟು ಸರ್ಕಾರಿ ಕಟ್ಟಡಗಳಿಗೆ ಕಾಲಕಾಲಕ್ಕೆ ಸರ್ಕಾರದಿಂದ ಅನುದಾನ ಸಿಗದೇ ವರ್ಷಾನುಗಟ್ಟಲೇ ನಿರ್ಮಾಣದ ಕಾಮಗಾರಿ ಕುಂಟುತ್ತಾ ಸಾಗುವುದನ್ನು ನಾವು ನೋಡಿದ್ದೇವೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಜಿಲ್ಲೆಯಲ್ಲಿ ಬರೋಬ್ಬರಿ 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಭವ್ಯ ಕಟ್ಟಡ ಕಾಮಗಾರಿ ಮುಗಿದು ಉದ್ಘಾಟನೆ ಆದರೂ ಅದು ಸಾರ್ವಜನಿಕ ಸೇವೆಗೆ ಲಭ್ಯವಾಗದೇ ಅನುಪಯುಕ್ತವಾಗಿದೆ.

Advertisement

ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ ಇಡೀ ಜಿಲ್ಲೆಗೆ ಮಾದರಿಯಾಗಿ ಮಾಜಿ ಕೃಷಿ ಸಚಿವ ಹಾಗೂ ಕ್ಷೇತ್ರದ ಹಾಲಿ ಶಾಸಕ ಎನ್‌.ಹೆಚ್‌. ಶಿವಶಂಕರರೆಡ್ಡಿ ರವರ ವಿಶೇಷ ಪ್ರಯತ್ನದಿಂದ ತಾಲೂಕಿನಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳನ್ನು ಒಂದೇ ಸೂರಿನಡಿ ತರಬೇಕೆಂಬ ಮಹತ್ವಕಾಂಕ್ಷೆ ಹೊತ್ತು 15 ಕೋಟಿ ರೂ. ವೆಚ್ಚದಲ್ಲಿ ಕಂದಾಯ ಇಲಾಖೆಯಿಂದ ನಿರ್ಮಿಸಿರುವ ನೂತನ ಮಿನಿ ವಿಧಾನಸೌಧ ಉದ್ಘಾಟನೆಯಾಗಿ 2 ತಿಂಗಳಾದರೂ ಕ್ಷೇತ್ರದ ಜನರ ಪಾಲಿಗೆ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನು ವಂತಾಗಿದೆ.

ಉದ್ಘಾಟನೆ ಆದರೂ ಅನುಪಯುಕ್ತ: ಕಳೆದ ಎರಡು ತಿಂಗಳ ಹಿಂದೆ ಅಂದರೆ ಜ.7 ರಂದು ನೂತನ ಮಿನಿ ವಿಧಾನಸೌಧವನ್ನು ಕಂದಾಯ ಸಚಿವ ಆರ್‌.ಅಶೋಕ್‌ ಪಾಲ್ಗೊಂಡು ಉದ್ಘಾಟಿಸಿ ತಾಲೂಕಿಗೆ ಸಮರ್ಪಿಸಿದ್ದರು. ಇದಕ್ಕೆ ಕ್ಷೇತ್ರದ ಶಾಸಕ ಶಿವಶಂಕರರೆಡ್ಡಿ, ಸಂಸದ ಬಚ್ಚೇಗೌಡ ಹಾದಿಯಾಗಿ ಇಡೀ ಜಿಲ್ಲಾಡಳಿತ ಸಾಕ್ಷಿಯಾಗಿತ್ತು. ಆದರೆ ಉದ್ಘಾಟನೆ ಕಾರ್ಯ ಕ್ರಮ ನಡೆದು ಎರಡು ತಿಂಗಳಾದರೂ ನೂತನ ಕಟ್ಟ ಡಕ್ಕೆ ತಾಲೂಕು ಕಚೇರಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ಕಟ್ಟಡಗಳು ಇನ್ನೂ ಸ್ಥಳಾಂತರಗೊಳ್ಳದೇ ಹೊಸ ಕಟ್ಟಡ ನೆನಗುದ್ದಿಗೆ ಬಿದ್ದಿರುವುದು ತಾಲೂಕಿನ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಉದ್ಘಾಟನೆ ಕಾರ್ಯಕ್ರಮ ಅದ್ಧೂರಿ: ಮಿನಿ ವಿಧಾನ ಸೌಧದ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ವನ್ನು ಜ.7 ರಂದು ಇಡೀ ಜಿಲ್ಲಾಡಳಿತ ಮುಂದೆ ನಿಂತು ವಿಶೇಷ ಆಸಕ್ತಿ ವಹಿಸಿ ವೈಭವವಾಗಿ ನಡೆಸಿಕೊಟ್ಟಿತು. ಆದರೆ ಕಟ್ಟಡ ಕ್ಷೇತ್ರದ ಜನರಿಗೆ ಬಳಕೆ ಆಗುವ ರೀತಿಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಗೊಳಿಸುವಲ್ಲಿ ಜಿಲ್ಲಾಡಳಿತ ವಿಶೇಷ ಆಸಕ್ತಿ ವಹಿಸದಿರಿವುದು ಏಕೆ ಎಂದು ಕ್ಷೇತ್ರದ ಜನ ಪ್ರಶ್ನಿಸುತ್ತಿದ್ದಾರೆ.

ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮಿನಿ ವಿಧಾನಸೌಧ ಕಟ್ಟಡಗಳು ಸಮರ್ಪಕವಾಗಿ ಇಲ್ಲದೇ ಸರ್ಕಾರದ ವಿವಿಧ ಇಲಾಖೆಗಳ ಕಟ್ಟಡಗಳು ಇಂದಿಗೂ ಸ್ವಂತ ನೆಲೆ ಇಲ್ಲದೇ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಸಾರ್ವಜನಿಕರು ಇಲಾಖೆಗಳ ಸೇವೆ ಪಡೆಯಲು ಖಾಸಗಿ ಕಟ್ಟಡಗಳಲ್ಲಿರುವ ಕಚೇರಿಗಳನ್ನು ಹುಡುಕಾಡುವುದರ ಜೊತೆಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸಿಗದೇ ತೀವ್ರ ಸಮಸ್ಯೆ ಎದುರಿಸುವಂತಾಗಿದೆ.

Advertisement

ಆದರೆ ತಾಲೂಕು ಕಚೇರಿಯಿಂದ ಹಿಡಿದು ಎಲ್ಲಾ ಇಲಾಖೆಗಳು ಒಂದೇ ಸೂರಿನಡಿ ಸಾರ್ವಜನಿಕರಿಗೆ ಸುಲಭವಾಗಿ ಕೈಗೆಟುಕಬೇಕೆಂಬ ಮಹತ್ವಕಾಂಕ್ಷೆ ಹೊತ್ತು ನಿರ್ಮಿಸಿದ ಮಿನಿ ವಿಧಾನಸೌಧ ಬಳಕೆಯಾಗದೇ ಇರುವುದು ಜಿಲ್ಲೆಯ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅಧಿಕಾರಿಗಳು ಮೌನ ಏಕೆ? :  ಇಡೀ ಜಿಲ್ಲೆಯಲ್ಲಿ ಗೌರಿಬಿದನೂರಲ್ಲಿ ಮಾದರಿ ಮಿನಿ ವಿಧಾನಸೌಧ ಕಟ್ಟಡ ತಲೆ ಎತ್ತಿದೆ. ಸಾರ್ವಜನಿಕ ಸೇವೆಗಾಗಿ ಉದ್ಘಾಟನೆಗೊಂಡು ಎರಡು ತಿಂಗಳಾಗಿದೆ. ಆದರೆ ಅದರ ಸದ್ಬಳಕೆ ಸಮರ್ಪಕವಾಗಿ ಆಗುತ್ತಿದೆಯೆ? ಇಲ್ಲವಾದರೆ ಏಕೆ ವಿಳಂಬ ಆಗುತ್ತಿದೆ? ತಾಲೂಕು ಮಟ್ಟದ ಕಚೇರಿಗಳು ಇನ್ನೂ ಏಕೆ ಅಲ್ಲಿಗೆ ಸ್ಥಳಾಂತರವಾಗಿಲ್ಲ. ಬಾಕಿ ಕಾಮಗಾರಿ ನಡೆಯಲು ಇಷ್ಟೊಂದು ವಿಳಂಬ ಏಕೆ? ಕಣ್ಗಾವಲು ಇಡಬೇಕಿದ್ದ ಜಿಲ್ಲಾಡಳಿತ ಕೂಡ ಈ ಬಗ್ಗೆ ಮೌನ ವಹಿಸಿರುವುದರಿಂದ ಸ್ಥಳಾಂತರ ಪ್ರಕ್ರಿಯೆ ಇನ್ನಷ್ಟು ವಿಳಂಬ ಕಾರಣ ಎನ್ನುವ ಮಾತು ಆ ಭಾಗದ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಹೊಸ ಮಿನಿ ವಿಧಾನಸೌಧಕ್ಕೆ ಎಲ್ಲಾ ಕಚೇರಿಗಳನ್ನು ಸ್ಥಳಾಂತರಗೊಳಿಸುವಂತೆ ಈಗಾಗಲೇ ಸೂಚಿಸಿದ್ದೇನೆ. ಹೊಸ ತಹಶೀಲ್ದಾರ್‌ ಬಂದಿರುವುದರಿಂದ ವಿಳಂಬ ಆಗಿದೆ. ವಾರದಲ್ಲಿ ಎಲ್ಲಾ ಕಚೇರಿಗಳನ್ನು ನೂತನ ಮಿನಿ ವಿಧಾನಸೌಧಕ್ಕೆ ಸ್ಥಳಾಂತರ ಮಾಡುವಂತೆ ತಹಶೀಲ್ದಾರ್‌ಗೆ ಸೂಚಿಸುತ್ತೇನೆ. – ಎನ್‌.ಎಚ್‌.ಶಿವಶಂಕರರೆಡ್ಡಿ, ಶಾಸಕರು

 

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next